ರಾಜಕೀಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಡ ಪಕ್ಷಗಳು ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದರೇ, ತಮಿಳುನಾಡಿನಲ್ಲಿ ಇಬ್ಬರು ಸತಿ-ಪತಿಗಳಾಗಿ ಜೊತೆಗೆ ನಡೆಯುವ ಪ್ರಮಾಣ ಮಾಡಿದ್ದಾರೆ. ಸೇಲಂ ಜಿಲ್ಲೆಯಲ್ಲಿ ‘ಸೋಶಿಯಲಿಸಂ’ ಎಂಬ ಯುವಕ ಮತ್ತು ‘ಮಮತಾ ಬ್ಯಾನರ್ಜಿ’ ಎಂಬ ಯುವತಿಯ ನಡುವೆ ಸರಳ ವಿವಾಹ ನಡೆದಿದೆ.
ಕಾಂಗ್ರೆಸ್ ಬೆಂಬಲಿಗರ ಕುಟುಂಬದ ಮದುಮಗಳು ಪಿ ಮಮತಾ ಬ್ಯಾನರ್ಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕೆಯ ಪೋಷಕರು ಪಶ್ಚಿಮ ಬಂಗಾಳದ ಹಾಲಿ ಸಿಎಂ ಮಮತಾ ಬ್ಯಾನರ್ಜಿಯವರು 20 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು ತುಂಬಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದನ್ನು ಗಮನಿಸಿ, ಅಭಿಮಾನದಿಂದ ಈ ಹೆಸರಿಟ್ಟಿದ್ದಾರೆ.
29 ವರ್ಷದ ವರ ಬಿಕಾಂ ಪದವಿ ಪಡೆದಿದ್ದಾರೆ. ತಮಿಳುನಾಡಿನ ಸೇಲಂ ನಗರದ CPI ಕಾರ್ಯಕರ್ತರಾದ 52 ವರ್ಷದ ಮೋಹನ್ ಎಂಬುವವರ ಅಪ್ಪಟ ಕಮ್ಯುನಿಷ್ಟ್ ಹೋರಾಟಗಾರ ಮಗ. ತಮ್ಮ ಮೂರು ಜನ ಮಕ್ಕಳಿಗೆ ಕಮ್ಯುನಿಸಂ, ಲೆನಿನಿಸಂ ಹಾಗೂ ಸೋಶಿಯಲಿಸಂ ಎಂದು ಹೆಸರಿಟ್ಟಿದ್ದಾರೆ.
“ನಾನು ಹತ್ತನೇ ತರಗತಿಯಲ್ಲಿದ್ದಾಗ, ನನ್ನ ಸ್ನೇಹಿತರು ನನ್ನ ಹೆಸರಿನ ಬಗ್ಗೆ ಮಾತನಾಡಲು ಪ್ರಾರಂಭಿಸಿದ ನಂತರ ನನಗೆ ಹೆಸರಿನ ಮಹತ್ವವನ್ನು ಅರ್ಥವಾಯಿತು. ಮಮತಾ ಬ್ಯಾನರ್ಜಿ ಪ್ರಬಲ ಮಹಿಳೆ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ಪಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸರಳ ಸಮಾರಂಭದಲ್ಲಿ ನಡೆದ ಮದುವೆ ಬಳಿಕ, ತಮ್ಮ ಹೆಸರುಗಳಿಗೆ ಅಂಟಿಕೊಂಡಿರುವ ರಾಜಕೀಯ ಪೈಪೋಟಿ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
“ನಾವು ಒಟ್ಟಿಗೆ ಇರುವ ಬಗ್ಗೆ ಸಂತೋಷಪಡುತ್ತೇವೆ. ಸಂತೋಷದ ಸಮಯಗಳಲ್ಲಿ ಮತ್ತು ಕಠಿಣ ಸಮಯಗಳಲ್ಲಿ ನಾವು ಒಟ್ಟಿಗೆ ಜೊತೆಯಾಗುತ್ತೇವೆ. ಏನೇ ಆಗಲಿ, ನಮ್ಮ ಇಡೀ ಜೀವನವನ್ನು ನಾವು ಒಟ್ಟಿಗೆ ಕಳೆಯುತ್ತೇವೆ” ಎಂದು ವರ ಸೋಶಿಯಲಿಸಂ ಹೇಳಿದ್ದಾರೆ.