Ad Widget .

ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್

ಬೆಂಗಳೂರು: ಬಹುತೇಕ ನಿಯಂತ್ರಣದ ಹೊರತಾಗಿ, ಹೇರಲಾದ ಲಾಕ್ಡೌನ್ ತೆರವುಗೊಳಿಸಿದರೆ, ಮತ್ತೆ ಸಂಕಷ್ಟ ಎದುರಾದರೆ ಲಾಕ್ಡೌನ್ ಹೇರುವುದು ಕಠಿಣವಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಪ್ರಸ್ತುತ ಹೇರಲಾಗಿರುವ ಲಾಕ್​ಡೌನ್​ ತೆರವುಗೊಳಿಸುವ ಕಾರ್ಯ ಸದ್ಯಕ್ಕಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.

Ad Widget . Ad Widget .

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ತೀರ್ಮಾನಿಸಲಾಗಿದ್ದು, ಇನ್ನಷ್ಟು ದಿನಗಳ ಕಾಲ ಲಾಕ್ಡೌನ್ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಲಾಕ್​ಡೌನ್​ಗೆ ಜನರ ಸ್ಪಂದನೆ ಇರುವುದರಿಂದ ಜೂನ್​ ಮಧ್ಯದ ತನಕವೂ ಲಾಕ್​ಡೌನ್ ವಿಸ್ತರಿಸಲು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಬಿ.ಎಸ್.ಯಡಿಯೂರಪ್ಪ ಜೂನ್ 5ರಂದು ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕೊರೊನಾ ಚೈನ್ ಲಿಂಕ್ ಕತ್ತರಿಸಲು ಅಧಿಕಾರಿಗಳು ಮತ್ತಷ್ಟು ದಿನದ ಕಾಲಾವಕಾಶ ಕೇಳಿದ್ದು, ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನ್​ಲಾಕ್​ ಮಾಡಿ ಮತ್ತೆ ಸೋಂಕು ಹೆಚ್ಚಾದರೆ ತೊಂದರೆಯಾಗುತ್ತದೆ. ಹೀಗಾಗಿ, ಲಾಕ್​ಡೌನ್ ವಿಸ್ತರಿಸಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು. ಶೇ.60 ರಷ್ಟು ಜನರಿಗೆ ಲಸಿಕೆ ತಲುಪಿಸಲು ತುರ್ತಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮತ್ತೊಂದು ಕಡೆ ಸೋಂಕಿತರು ಸಂಖ್ಯೆ ಗಣನೀಯವಾಗಿ ಇಳಿಮುಖ ಕಾಣುತ್ತಿದ್ದರೂ ಮೂರನೇ ಅಲೆಯ ಆತಂಕ‌ ಶುರುವಾಗಿರುವುದರಿಂದ ಬಿಬಿಎಂಪಿ ಕೂಡಾ ಲಾಕ್​ಡೌನ್ ವಿಸ್ತರಣೆಗೆ ಒಲವು ತೋರಿದೆ. ಸೋಂಕಿನ ಪ್ರಮಾಣ ಮತ್ತಷ್ಟು ತಗ್ಗಿಸಿ, ಲಸಿಕೆ ಹೆಚ್ಚಿಸಲು ಲಾಕ್​ಡೌನ್ ಅನುಕೂಲ. ಈಗಿರುವ ಕಠಿಣ ನಿಯಮಗಳನ್ನೇ ಮುಂದುವರೆಸುವುದು ಉತ್ತಮ. ಒಮ್ಮೆ ಅನ್ ಲಾಕ್ ಮಾಡಿದರೆ ಮತ್ತೆ ಲಾಕ್​ಡೌನ್ ಮಾಡುವುದು ಅಸಾಧ್ಯ. ಹೀಗಾಗಿ ಜೂನ್ ಮಧ್ಯದವರೆಗೆ ಲಾಕ್​ಡೌನ್ ಇರಲಿ. ಒಂದೊಮ್ಮೆ ಲಾಕ್​ಡೌನ್ ಮುಂದುವರೆಯದಿದ್ದರೆ ಕಟ್ಟುನಿಟ್ಟಿನ ಷರತ್ತು ವಿಧಿಸಲೇಬೇಕು ಎಂದು ಬಿಬಿಎಂಪಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೋಂಕಿತರು ಹೆಚ್ಚು ಹೆಚ್ಚು ಪತ್ತೆಯಾದರೂ ಚಿಕಿತ್ಸೆ ನೀಡಲು ಟ್ರಯಾಸ್ ಸೆಂಟರ್, ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಆಗಿದೆ. ಹೀಗಾಗಿ ಹೋಮ್‌ ಐಸೋಲೇಶನ್ ಪದ್ದತಿ ರದ್ದುಪಡಿಸಿ, ಟ್ರಯಾಸ್ ಸೆಂಟರ್​ಗೆ ಸೋಂಕಿತರನ್ನು ಶಿಫ್ಟ್ ಮಾಡಿಸಬೇಕು. ಈಗಾಗಲೇ ತೀವ್ರ ಸೋಂಕಿನ ಲಕ್ಷಣ ಇದ್ದವರಿಗಷ್ಟೇ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಇದೇ ಕ್ರಮವನ್ನು ಮುಂದುವರೆಸಬಹುದು. ಆದರೆ, ಅನ್​ಲಾಕ್​ ನಂತರವೂ ಕೆಲ ಕ್ಷೇತ್ರಗಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು. ಶೇ.50, ಶೇ.75 ಎಂಬ ಯಾವ ವಿನಾಯಿತಿಯನ್ನೂ ನೀಡದೆ ಚಿತ್ರಮಂದಿರಗಳನ್ನು ಸಂಪೂರ್ಣ ಮುಚ್ಚಬೇಕು. ಮಾಲ್​ಗಳನ್ನೂ ತೆರೆಯಲು ಅವಕಾಶ ನೀಡಬಾರದು ಎಂದು ಬಿಬಿಎಂಪಿ ತಿಳಿಸಿದೆ.

ಜೂನ್ 7 ರ ನಂತರವೂ ಹೊಟೇಲ್, ರೆಸ್ಟೋರೆಂಟ್​ಗಳಲ್ಲಿ ಕೇವಲ ಪಾರ್ಸೆಲ್​ಗೆ ಅವಕಾಶ ನೀಡಬೇಕು. ಬಾರ್, ಪಬ್​ಗಳು ಯಥಾಸ್ಥಿತಿಯಲ್ಲಿ ಬಂದ್​ ಆಗಿರಬೇಕು. ಬಾರ್​ನಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆಗೆ ಅವಕಾಶ ನೀಡಬೇಕು. ಸದ್ಯ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯ ತನಕ ಖರೀದಿಗೆ ಇರುವ ಅವಕಾಶವನ್ನು ಜೂನ್ 7ರ ನಂತರ ಹಿಂದಿನಂತೆ ಬೆಳಗ್ಗೆ 10 ಗಂಟೆಯಿಂದ ಸಂಜೆಯ ತನಕ ವಿಸ್ತರಿಸಬಹುದು ಎಂಬ ಸಲಹೆ ಕೇಳಿಬಂದಿದೆ.

ಆಟೋ, ಓಲಾ, ಊಬರ್, ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಕೊವಿಡ್​ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಂಚರಿಸಲು ಅನುಮತಿ ಕೊಡಲು ಯೋಚಿಸಲಾಗುತ್ತಿದೆ. ಹೀಗಾಗಿ ಶೇ.50 ರಷ್ಟು ಮಾತ್ರ ಪ್ರಯಾಣಿಕರು ಸಂಚಾರ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಇತ್ತ ಜಿಮ್, ಪಾರ್ಕ್, ಈಜುಕೊಳಗಳು ಬಂದ್ ಆಗಿರಲಿದ್ದು, ಮದುವೆಯಲ್ಲಿ 40 ಜನ, ಅಂತ್ಯಸಂಸ್ಕಾರದಲ್ಲಿ 10 ಜನ ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಚಿಂತನೆ ನಡೆಸಲಾಗುತ್ತಿದೆ.

ಸಭೆ, ಸಮಾರಂಭ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರೆಯಲಿದ್ದು, ಕೆ.ಆರ್ ಮಾರುಕಟ್ಟೆ, ರಸೆಲ್ ಮಾರುಕಟ್ಟೆಗಳಂತಹ ಬೃಹತ್ ಮಾರುಕಟ್ಟೆಗಳು ಬಂದ್ ಆಗಿರಲಿವೆ. ತರಕಾರಿ, ಹೂ ಹಣ್ಣು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆಯಿಂದ ಸಂಜೆವರೆಗೂ ಅವಕಾಶ ನೀಡುವ ಸಾಧ್ಯತೆ ಇದೆ. ಈ ನಡುವೆ ಕೈಗಾರಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಸ್ತಾಪ ಮಾಡಿದರಾದರೂ ಅದಕ್ಕೆ ಕೊವಿಡ್ ಉಸ್ತುವಾರಿ ಸಚಿವರು, ನಗರ ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸದ್ಯಕ್ಕೆ ಕೈಗಾರಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *