ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದ್ದು, ಅಡುಗೆ ಎಣ್ಣೆ ದರ 200 ರೂ. ಸನಿಹಕ್ಕೆ ತಲುಪಿದೆ. ಈ ಮೂಲಕ ಮತ್ತೆ ಮತ್ತೆ ಜನಸಾಮಾನ್ಯರ ಜೀವನದಲ್ಲಿ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಕಳೆದ ವರ್ಷದಿಂದಲೇ ಏರುಗತಿಯಲ್ಲಿ ಸಾಗುತ್ತಿರುವ ಅಡುಗೆ ಎಣ್ಣೆ ದರ 180 ರೂಪಾಯಿ ದಾಟಿ 200 ರೂ. ಸನಿಹಕ್ಕೆ ಬಂದಿದೆ. ಇದರಿಂದಾಗಿ ಬಡವರು, ಮಧ್ಯಮವರ್ಗದವರು ತೊಂದರೆ ಅನುಭವಿಸುವಂತಾಗಿದೆ. ಕೊರೋನಾ ಕಾರಣದಿಂದ ಲಾಕ್ಡೌನ್, ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಇಂಧನ ಬೆಲೆಯೊಂದಿಗೆ ಅಡುಗೆ ಎಣ್ಣೆ ಬೆಲೆ ಕೂಡ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಬೆಲೆ ಭಾರೀ ಏರಿಕೆಯಾಗಿರುವುದರಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ.
ಅಡುಗೆ ಎಣ್ಣೆ ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇದು ಕಳವಳಕಾರಿ ಬೆಳವಣಿಗೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಆಹಾರ ಇಲಾಖೆ ದರ ಇಳಿಕೆ ಬಗ್ಗೆ ಚರ್ಚೆ ನಡೆಸಿದೆ. ಖಾದ್ಯ ತೈಲ ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಒಂದು ದಶಕದಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸೋಯಾ, ಸೂರ್ಯಕಾಂತಿ, ತಾಳೆ, ಸಾಸಿವೆ, ವನಸ್ಪತಿ, ಶೇಂಗಾ ಎಣ್ಣೆ ಬೆಲೆ 11 ವರ್ಷಗಳಲ್ಲೇ ಅಧಿಕ ದರ ದಾಖಲಿಸಿ ಭಾರೀ ಏರಿಕೆಯಾಗಿದೆ. ಬೇರೆ ದೇಶಗಳಿಗೆ ಹಾಗೂ ಅಂತರರಾಷ್ಟ್ರೀಯ ಬೆಲೆಗಳಿಗೆ ಹೋಲಿಸಿದರೆ ಭಾರತದಲ್ಲಿ ಅಡುಗೆ ಎಣ್ಣೆ ದರ ಭಾರೀ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.