ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ.
ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ. ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಪಿಎಸ್ ಐ ಅಮಾನವೀಯ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನಂತರ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಇದೀಗ ಯುವಕನ ವಿರುದ್ಧ ದೂರು ನೀಡಿರುವ ವಿವಾಹಿತ ಮಹಿಳೆ, ನನ್ನ ಸಂಸಾರ ಹಾಳಾಗಲು ಯುವಕ ಪುನೀತ್ ಕಾರಣ. ಪದೇ-ಪದೇ ನನಗೆ ಫೋನ್ ಮಾಡಿ ಅವನೊಂದಿಗೆ ಸಹಕರಿಸಲು ಹೇಳುತ್ತಿದ್ದ. ಇದೀಗ ಆತನೊಂದಿಗಿನ ನನ್ನ ಫೋನ್ ಕಾಲ್ ಸಂಭಾಷಣೆಯು ವೈರಲ್ ಆಗಿದ್ದು, ನನ್ನ ಮಾನ ಹರಾಜು ಹಾಕಲಾಗಿದೆ. ಎಂದು ದೂರು ನೀಡಿದ್ದು, ಹೇಳಿಕೆ ಪಡೆದ ಪೊಲೀಸರು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ ಊರಿನ ಜನ, ಪುನೀತ್ ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಪಿಎಸ್ಐ ಮತ್ತು ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಚಿಕ್ಕಮಗಳೂರು ಎಸ್ಪಿ ಗ್ರಾಮಕ್ಕೆ ಭೇಟಿ ನೀಡಿದ್ದು ಪುನೀತ್ ಮತ್ತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅತ್ತ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಗಂಭೀರವಾಗಿ ಪರಿಗಣಿಸಿರುವ ಐಜಿಪಿ, ಪ್ರಕರಣವನ್ನು ಸಿಐಡಿ ಕೈಗೆ ಒಪ್ಪಿಸಿದ್ದಾರೆ.