ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ನಡುವೆ.
ಸಮುದ್ರ ಮಟ್ಟದಿಂದ 1712 ಮೀಟರ್ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ ಚಾರಣ ಮಾಡಲು ಸುಮಾರು 13 ಕಿ.ಮೀ. ನಡೆಯಬೇಕಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯದ ಕಡೆಯಿಂದ ನೀವು ಪ್ರಯಾಣ ಬೆಳೆಸಿದರೆ ಸುಮಾರು 4 ರಿಂದ 5 ಕಿ.ಮೀ ಗಳಷ್ಟು ದಟ್ಟವಾದ ಅರಣ್ಯದಲ್ಲಿ ನೆಡೆಯಬೇಕಾಗುತ್ತದೆ. ಇದು ಸ್ವಲ್ಪ ಕಷ್ಟಕರವಾಗಿದ್ದರೂ ಚಾರಣಿಕರಿಗೆ ಈ ಪ್ರಯಾಣ ಹೊಸ ರೀತಿಯ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲವಾದಲ್ಲಿ ಸೋಮವಾರ ಪೇಟೆಯಿಂದ ಈ ಪ್ರದೇಶಕ್ಕೆ ನೀವು ಹೋಗಲು ಬಯಸಿದರೆ 20 ಕಿ.ಮೀ ಕ್ರಮಿಸಿದರೆ ಬೀದಳ್ಳಿ ಎಂಬ ಊರುಸಿಗುತ್ತದೆ. ಅಲ್ಲಿಂದ 10 ಕಿ.ಮೀ ನೆಡೆಯಬೇಕಾಗುತ್ತದೆ. ಇದು ಕೂಡಾ ಉತ್ತಮವಾದ ದಾರಿ.
ನೀವು ಚಾರಣಕ್ಕೆ ಹೊರಡುವಾಗ ನಿಮಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಆದರೆ ನಿಮಗೆಷ್ಟು ಬೇಕೋ ಅಷ್ಟು ಮಾತ್ರ ಕೊಂಡೊಯ್ಯಿರಿ. ಯಾಕೆಂದರೆ ನಡೆಯುವ ಹಾದಿಯಲ್ಲಿ ನಿಮ್ಮ ವಸ್ತುಗಳು ಕಷ್ಟ ಕೊಡಬಹುದು. ನೀವು ಕುಕ್ಕೆ ಸುಬ್ರಹ್ಮಣ್ಯದಿಂದ ಚಾರಣಕ್ಕೆ ಹೊರಟರೆ, ಸುಬ್ರಹ್ಮಣ್ಯದಿಂದ 1 ಕಿ.ಮೀ. ದೂರದ ದೇವರಗದ್ದೆಯಿಂದ ಚಾರಣ ಶುರುವಾಗುತ್ತದೆ. ಇಲ್ಲಿಂದ ನಡೆದರೆ ಮೊದಲಿಗೆ ನಿಮಗೆ ಸಿಗುವುದು ಭೀಮನಕಲ್ಲು. ಹಾಗೆಯೇ ಮುಂದಕ್ಕೆ ಸಾಗಿದರೆ ನಿಮಗೆ ಗಿರಿಗದ್ದೆ ಭಟ್ಟರ ಮನೆಯೊಂದು ಸಿಗುತ್ತದೆ. ಈ ಬೆಟ್ಟದಲ್ಲಿ ಇರುವ ಏಕೈಕ ಮನೆ ಎಂದರೆ ಇದೊಂದೇ. ನೀವು ಊಟದ ವ್ಯವಸ್ಥೆಗೆ ಹಾಗೂ ತಂಗಲು ಇದು ಸೂಕ್ತವಾದ ಜಾಗ ಇದಾಗಿದ್ದು ಮೊದಲೇ ಅವರಿಗೆ ತಿಳಿಸಿರಬೇಕಾಗುತ್ತದೆ. ಇಲ್ಲವಾದಲ್ಲಿ, ನೀವು ಅರಣ್ಯ ಇಲಾಖೆಯ ಕಚೇರಿ ಬಳಿ ಕ್ಯಾಂಪ್ ಮಾಡಬಹುದು.
ಈ ಪ್ರದೇಶದಲ್ಲಿ ಚಾರಣ ಮಾಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಅದಕ್ಕಾಗಿ ನೀವು ಚಾರಣ ಮಾಡುವ ದಾರಿಯಲ್ಲಿ ಒಂದು ತಪಾಸಣೆ ಕೇಂದ್ರವಿದೆ. ಅಲ್ಲಿ ನೀವು 350 ರೂ.ಗಳ ಪ್ರವೇಶ ಶುಲ್ಕ ಪಾವತಿಸಿ ಸಾಗಬೇಕು. ಗಿರಿಗದ್ದೆ ಭಟ್ಟರ ಮನೆಯಿಂದ ಸುಮಾರು 2 ಕಿ.ಮೀ ಸಾಗಿದರೆ ನಿಮಗೆ ಕಲ್ಲುಮಂಟಪ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ 2 ಕಿಮೀ ಸಾಗಿದರೆ ಭತ್ತದ ರಾಶಿ ಎನ್ನುವ ಸ್ಥಳ ಕಂಡುಬರುತ್ತದೆ.
ಪುಷ್ಪಗಿರಿ ತಪ್ಪಲು
ಭತ್ತದ ರಾಶಿ ಪರ್ವತ ಕಳೆದು ಮುಂದೆ ನಿಮಗೆ ಶೇಷಪರ್ವತ, ಸಿದ್ದ ಪರ್ವತ, ಕುಮಾರ ಪರ್ವತಗಳ ಸರಣಿ ಎದುರಾಗುತ್ತದೆ. ಇವುಗಳನ್ನು ಆಸ್ವಾದಿಸುತ್ತಾ ಸಾಗುತ್ತಿದ್ದರೆ, ಹಕ್ಕಿಗಳ ಕಲರವ, ಬಾನಲ್ಲಿ ಮೋಡದ ಸಾಲು, ಕೈಗೆಟುವ ಹಾಗೆ ಸೂರ್ಯ ಆ ಸನ್ನಿವೇಶವೇ ಅದ್ಬುತ ಅನುಭವ ನೀಡುತ್ತದೆ.
ಸೋಮವಾರಪೇಟೆಯಿಂದ ನೀವು ಚಾರಣಕ್ಕೆ ಹೊರಡಬೇಕು ಎಂದು ನೀವು ಅಂದುಕೊಂಡಲ್ಲಿ ಬೀಡಳ್ಳಿಗೆ ಬಸ್ಸಿನಲ್ಲಿ ಬರಬೇಕು ನಂತರ ಅಲ್ಲಿರುವ ಹೊಲ ಗದ್ದೆಗಳನ್ನು ದಾಟಿ ಮುಂದೆ ಸಾಗಿದರೆ ಒಂದು ಪುರಾತನವಾದ ಶಿವನ ದೇವಾಲಯ ನಿಮಗೆ ಕಾಣಸಿಗುತ್ತದೆ. ಈ ಶಿವನ ದೇವಾಲಯದವರೆಗೆ ಒಳ್ಳೆಯ ರಸ್ತೆಯಿದ್ದು, ಹಾಗೆಯೇ ಮುಂದೆ ಸಾಗಿದರೆ ಶಿವನ ದೇವಾಲಯದ ಹತ್ತಿರ ಪುರಾತನವಾದ ಹಾಗು ಬಹಳ ದೊಡ್ಡದಾದ ಸಂಪಿಗೆ ಮರ ಕಂಡುಬರುತ್ತದೆ. ಅಲ್ಲಿಂದ ನೀವು ಕಾಲುದಾರಿಯಲ್ಲಿ ಸುಮಾರು 10 ಕಿ.ಮೀ. ದಟ್ಟವಾದ ಅರಣ್ಯದಲ್ಲಿ ಕ್ರಮಿಸಿದರೆ ನೀವು ಕುಮಾರ ಪರ್ವತವನ್ನು ತಲುಪಬಹುದು.
ಮುಂಜಾನೆ ಪರ್ವತದ ನಡುವೆ ಇಣುಕುವ ನೇಸರ
ಈ ಪ್ರದೇಶವು ತುಂಬಾ ಚಳಿಯಿಂದ ಕೂಡಿದ್ದು ಸಪ್ಟೆಂಬರ್‌ನಿಂದ ಫೆಬ್ರವರಿವರೆಗೆ ಇಲ್ಲಿ ಚಾರಣ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇಲ್ಲಿ ದಟ್ಟವಾದ ಕಾಡುಗಳಷ್ಟೇ ಅಲ್ಲ ಇಲ್ಲಿ ಬೀಸುವ ಚಳಿಗಾಳಿ ನಿಮಗೆ ರಾತ್ರಿ ತಂಗಲು ತೊಂದರೆಯನ್ನು ಉಂಟುಮಾಡಬಹುದು. ಹಾಗಾಗಿ ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
ಇವುಗಳನ್ನು ಕೊಂಡೊಯ್ಯದಿರಿ: ಚಾರಣಿಗರನ್ನು ಅರಣ್ಯ ಇಲಾಖೆ ಮೂರು ಬಾರಿ ತಪಾಸಣೆ ಮಾಡಿದ ನಂತರವೇ ವನ್ಯಧಾಮಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಆದ್ದರಿಂದ ನಿಮ್ಮ ಬಳಿ ಅಗತ್ಯ ವಸ್ತುಗಳು ಮಾತ್ರ ಇರಲಿ. ಯಾವುದೇ ಕಾರಣಕ್ಕೆ ಅಮಲು ಪದಾರ್ಥ, ಪ್ಲಾಸ್ಟಿಕ್, ಟಿಶ್ಯೂ, ಚಾಕು, ಟೇಪ್ ರೆಕಾರ್ಡರ್, ಮತ್ತಿತ್ತರ ವಸ್ತುಗಳನ್ನು ಕೊಂಡೊಯ್ಯಬೇಡಿ. ಇವು ಪರಿಸರಕ್ಕೆ ಮಾರಕ ಹಾಗೂ ಪರ್ವತದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಕುಮಾರ ಪರ್ವತ ಚಾರಣ ತಾಣವಷ್ಟೇ ಅಲ್ಲ. ಅದೊಂದು ಶ್ರದ್ಧಾಕೇಂದ್ರವೂ ಹೌದು. ಆದ್ದರಿಂದ ನಿಮಗೆ ತಿನ್ನಲು ಮತ್ತು ದಾಹ ತೀರಿಸಿಕೊಳ್ಳಲು ಬೇಕಾದ ವಸ್ತುಗಳನ್ನು ಮಾತ್ರ ಜೊತೆಗೊಯ್ಯಿರಿ.
ನೀವು ಮೊದಲ ಬಾರಿ ಚಾರಣ ಮಾಡುವವರಾಗಿದ್ದಲ್ಲಿ ಈ ಕುಮಾರ ಪರ್ವತ ನಿಮಗೆ ಮರೆಯಲಾರದ ನೆನಪಿನ ಬುತ್ತಿ ನೀಡುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಸೌಂದರ್ಯ ರಾಶಿ, ಸೂರ್ಯೋದಯದ ಸೊಬಗು ಮುಂಜಾನೆ ಹನಿ ಹಚ್ಚ ಹಸಿರಿನ ಬೆಟ್ಟ ಇವೆಲ್ಲದರ ಸಂಗಮ ಕುಮಾರ ಪರ್ವತವಾಗಿದ್ದು ನೀವು ಇದನ್ನೆಲ್ಲಾ ನೋಡಬೇಕು ಎಂದರೆ ಒಮ್ಮೆ ಕುಮಾರ ಪರ್ವತಕ್ಕೆ ಭೇಟಿ ನೀಡಲೇಬೇಕು.
ಬರಹ : ಪ್ರಸಾದ್ ಕೋಲ್ಚಾರ್