ಒಂದು ಟೀಂ ರೆಡಿ ಮಾಡಿ ಅದನ್ನು ಒಗ್ಗೂಡಿಸಿ ಹೋಗುವುದು ಸುಲಭದ ಮಾತಲ್ಲ. ಅದಕ್ಕಾಗಿ ಹಲವು ದಿನದ ಪ್ರಯತ್ನ ಎಡೆಬಿಡದೇ ಸಾಗಿತ್ತು. ಕೆಲಸದ ಬ್ಯುಸಿ ಶೆಡ್ಯೂಲ್ ನಲ್ಲೂ ಅವರಿಗೊಮ್ಮೆ, ಇವರಿಗೊಮ್ಮೆ ಕಾಲ್ ಮಾಡಿ, ಮೆಸೇಜ್ ಮಾಡಿ ಕೆಲವೊಮ್ಮೆ ಬೈದು 27 ಜನರನ್ನು ಒಟ್ಟು ಸೇರಿಸಿ ಕಾಫಿ ನಾಡು ಚಿಕ್ಕಮಗಳೂರಿಗೆ ಕರೆತರುವಲ್ಲಿ ನಮ್ ಹವ್ಯ ಮೇಡಂ ಹಾಗೂ ಅವರಿಗೆ ಸಹವರ್ತಿಯಾಗಿ ನಿಂತ ಸೌಮ್ಯ ಮೇಡಂಗೆ ಥ್ಯಾಂಕ್ಸ್ ಹೇಳಲೇಬೇಕು. ಗಂಡ್ ಹೈಕಳನ್ನು ಮೀರಿಸಿ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಅಂತ ತೋರಿಸಿಕೊಟ್ರು.
ಹಿಂದಿನ ವರ್ಷದ ವಿಸ್ಮಯ ಯಾತ್ರೆಯ ಬಳಿಕ ಈ ಬಾರಿ ಎಲ್ಲೋಗೋದು ಅಂತ ಚರ್ಚೆಯಾದಾಗ ಸಡನ್ನಾಗಿ ನೆನಪಾಗಿದ್ದು ಚಿಕ್ಕಮಗಳೂರು. ಪ್ರಕೃತಿ ಸೌಂದರ್ಯವೇ ಹೊದ್ದು ಮಲಗಿರುವ ಪಶ್ಚಿಮ ಘಟ್ಟದ ಸಾಲುಗಳ ಮಧ್ಯೆ ಇಣುಕಿ ಬರುವ ಪ್ರಯತ್ನ ಅಂತೂ ಡಿಸೆಂಬರ್ 25ಕ್ಕೆ ನಿಗದಿಯಾಗಿತ್ತು.
ಗೊತ್ತುಪಡಿಸಿದ ವ್ಯಾನ್ ನಲ್ಲಿ ಮುಂಜಾನೆ ಎರಡು ಗಂಟೆಗೆ ಹೊರಡುವುದೆಂದು ತೀರ್ಮಾನವಾದ ಕೂಡಲೇ ದೂರದೂರಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಮಿತ್ರರೆಲ್ಲ ಸರಿಯಾದ ಸಮಯಕ್ಕೆ ತಮ್ಮ ನಿಲ್ದಾಣದಲ್ಲಿ ಹಾಜರಿದ್ದರು.
ಮುಂಜಾನೆ ಎರಡು ಗಂಟೆಗೆ ಶುರುವಾದ ನಮ್ಮ ಪಯಣ ಸವಿನಿದ್ರೆಯೊಂದಿಗೆ ಕೊನೆಗೊಂಡದ್ದು ಬೆಳಗ್ಗಿನ ಜಾವ ಏಳು ಗಂಟೆಗೆ, ಚಿಕ್ಕಮಗಳೂರಿನ ತುತ್ತತುದಿ ಮುಳ್ಳಯ್ಯನಗಿರಿಯ ಬುಡದಲ್ಲಿ.
ಕೂತು ಕಾಲೆಲ್ಲಾ ಜೋಮು ಹಿಡಿದಂತಾದರೂ ಅದೆಲ್ಲವನ್ನೂ ಲೆಕ್ಕಿಸದೇ ನಮ್ ಹುಡುಗ್ರು ಬೆಟ್ಟ ಏರಲು ತಯಾರಾದ್ರು. ಕೆಲವರಂತೂ ನಾವೇ ಮೊದಲೆಂದು ಅದಾಗಲೇ ಮಾರು ದೂರ ಸಾಗಿಯಾಗಿತ್ತು. ಸ್ವಲ್ಪ ದೂರದಲ್ಲಿ ನಮಗೆ ಕಾಣಸಿಕ್ಕಿದ್ದು ಸೀತಾಳಯ್ಯನ ಮಠ ಹಾಗೂ ಗಿರಿ. ಅಲ್ಲಿಂದ ಮುಳ್ಳಯ್ಯನಗಿರಿ ತುದಿಗೆ 3 ಕಿ.ಮೀ ಇದೆ ಎಂದಾಗ ಕೆಲವರು ಉಸ್ಸಪ್ಪಾ ಎಂದರೂ ಹಲವರು ಜೀಪ್ ಬೇಡವೆಂದು ಕಾಲಿಗೆ ಬುದ್ದಿ ಹೇಳಿದರು. ನಡೆದು ಅಭ್ಯಾಸ ಇಲ್ಲದಿದ್ದರೂ ಮುಂದಿನವರನ್ನು ಅನುಸರಿಸಿ ಹಾಗೋ ಹೀಗೋ ಗಿರಿಯ ಅಂಚು ತಲುಪುವಾಗ ಸರಿಸುಮಾರು 9 ಗಂಟೆ.
ಗಿರಿಶೃಂಗದ ತುತ್ತತುದಿ ತಲುಪುವಾಗ ಅಷ್ಟೊತ್ತು ನೋಯುತ್ತಿದ್ದ ಕಾಲುಗಳು ನಿರಾಳವಾದವು. ಗಿರಿಯ ತುದಿಯಲ್ಲಿನ ಮುಳ್ಳಯ್ಯ ಸ್ವಾಮಿಗೆ ನಮಿಸಿ ಮತ್ತೆ ಕೆಳಗಿಳಿದೆವು. ಖಾಲಿ ಹೊಟ್ಟೆಯಲ್ಲಿದ್ದ ನಮಗೆ ಅದಾಗಲೇ ಹಸಿವಾಗಿತ್ತು. ಅಲ್ಲೇ ಚುರುಮುರಿ, ಎಳನೀರು, ಕಬ್ಬಿನ ಹಾಲು ಕುಡಿದು ವಾಪಾಸು ನಾವು ಬಂದ ವ್ಯಾನ್ ಕಡೆಗೆ ಸಾಗಿದೆವು.
ನಡೆದು ಸುಸ್ತಾಗಿದ್ದ ಕೆಲ ಮಂದಿ ಜೀಪ್ ಮೊರೆ ಹೋದರೆ ಹತ್ತಿಪ್ಪತ್ತು ಮಂದಿ ನಡೆದೇ ಸಾಗಿದರು. ಗಿರಿಗಳ ನಡುವಿನ ಪ್ರಕೃತಿಯ ರಮಣೀಯತೆಯನ್ನು ಸವಿಯುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಮತ್ತೆ ದತ್ತ ಪೀಠ, ಬಾಬಾ ಬುಡನ್ ಗಿರಿಯತ್ತ ಹೆಜ್ಜೆ ಸಾಗಿತ್ತು.
ಈ ನಡುವೆ ಹಸಿದ ಹೊಟ್ಟೆಯನ್ನು ತಣಿಸಲು ದಾರಿ ಮದ್ಯೆ ಸಿಕ್ಕಿದ ಹೊಟೇಲೊಳಗೆ ನುಗ್ಗಿದೆವು. ನಮಗೆ ಬೇಕಾದ್ದು ಸಿಗದೇ ಇದ್ದ ಕಾರಣ ಲಭ್ಯವಿದ್ದ ದೋಸೆ, ಪರೋಟ, ಇಡ್ಲಿಯನ್ನೇ ಚಪ್ಪರಿಸಿ ತಿಂದು ಟೀ ಕುಡಿದು ದತ್ತಾತ್ರೇಯ ಪೀಠಕ್ಕೆ ಯಾತ್ರೆ ಮುಂದುವರೆದಿತ್ತು. ಸ್ವಾಮಿಗೆ ಕೈ ಮುಗಿದು, ಗದ್ದುಗೆಗೆ ನಮಿಸಿ ಮುಂದೆಲ್ಲಿಗೆ ಪಯಣ ಎಂದು ಆಲೋಚಿಸಿದಾಗ ಸಿರಿ ಎಸ್ಟೇಟ್, ಹೊನ್ನಮ್ಮನ ಹಳ್ಳ ಫಾಲ್ಸ್ ಗಳು ನೋಡ ಸಿಕ್ಕಿದವು. ಅಷ್ಟೊತ್ತಿಗಾಗಲೇ ಮಧ್ಯಾಹ್ನವಾದ ಕಾರಣ ಸಿಟಿಯಲ್ಲಿ ಹೊಟೇಲಲ್ಲಿ ಮಧ್ಯಾಹ್ನದ ಊಟೋಪಚಾರ ಮುಗಿಯಿತು.
ಬಳಿಕ ಶಿಲ್ಪಕಲೆಗಳ ತವರು ಹಾಸನ ಜಿಲ್ಲೆಯ ಬೇಲೂರಿನತ್ತ ನಮ್ಮ ಪಯಣ. ಚಿಕ್ಕಮಗಳೂರಿನಿಂದ ಮೂವತ್ತು ಕಿ.ಮೀ ಕ್ರಮಿಸಿದರೆ ಬೇಲೂರು ಚೆನ್ನಕೇಶವನ ತಾಣ.
ಹೊಯ್ಸಳರಸರು ಕಟ್ಟಿಸಿದ ಚೆನ್ನ ಕೇಶವ ಸ್ವಾಮಿಯ ಬೃಹತ್ ದೇವಾಲಯ ನೋಡುವುದೇ ಹಬ್ಬ. ಮಹಾಲಕ್ಷ್ಮಿ, ಭೂದೇವಿ ಸಹಿತ ಶ್ರೀ ಚೆನ್ನಕೇಶವ ಬಂದ ಭಕ್ತರನ್ನು ಹರುಸುತ್ತಾನೆ. ಅಲ್ಲಿನ ಪ್ರತಿಯೊಂದು ಕಲಾಕೃತಿಯೂ ಆಗಿನ ಕಾಲದ ರಾಜವೈಭೋಗವನ್ನು ಸಾರಿ ಹೇಳುತ್ತದೆ. ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳು, ಉಬ್ಬು ಶಿಲ್ಪಗಳು ನಿಜಕ್ಕೂ ಅದ್ಭುತವನ್ನು ಕಣ್ಣೆದುರಿಗೆ ತರುತ್ತವೆ. ದೇವಾಲಯವನ್ನು, ದೇವರ ದರ್ಶನ ಪಡೆದು ಮತ್ತೆ ನಮ್ಮೂರತ್ತ ಪಯಣಕ್ಕೆ ಅಣಿಯಾದೆವು. ಕಲಾಕಾರನಿಗೆ ನಮಿಸಿ, ವ್ಯಾನ್ ಹತ್ತಿದ ಮತ್ತೆ ಊರತ್ತ ನಮ್ಮ ಪಯಣ ಸಾಗಿತ್ತು.
ಎಲ್ಲರೊಂದಿಗೆ ಹಾಳು ಹರಟೆ ಮಾತನಾಡುತ್ತಾ ಕುಚೇಷ್ಟೆ ಮಾಡುತ್ತಾ ಒಂದು ದಿನದ ಪ್ರಯಾಣ ಸುಂದರ ಅನುಭವವನ್ನು ನೀಡಿತ್ತು.
ಚಿಕ್ಕಮಗಳೂರ ಚಿಕ್ಕ ಪಯಣವಾದರೂ ಅನುಭವವಂತೂ ಹಿರಿದಾಗಿತ್ತು. ಎಲ್ಲಾ ಸಹೋದ್ಯೋಗಿ ಮಿತ್ರರ ಸಹಕಾರ ಪ್ರವಾಸ ಆಯೋಜಿಸಿದವರ ಮುಖದಲ್ಲಿ ಏನೋ ಸಾಧಿಸಿದ ಛಾಯೆ ತಂದದ್ದು ಸುಳ್ಳಲ್ಲ.
ಬರಹ : ಪ್ರಸಾದ್ ಕೋಲ್ಚಾರ್