ಬೆಂಗಳೂರು: ಹನಿಟ್ರ್ಯಾಪ್ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಕಾಂಗ್ರೆಸ್ ನಾಯಕಿಯೊಬ್ಬಳನ್ನ ಬಂಧಿಸಿದ್ದಾರೆ. ಈಕೆಯ ವಿರುದ್ಧ ಪ್ರಭಾವಿ ರಾಜಕಾರಣಿಗಳು, ಐಪಿಎಸ್, ಐಎಎಸ್ ಅಧಿಕಾರಿಗಳೂ ಸೇರಿದಂತೆ ಹೈ-ಪ್ರೊಫೈಲ್ ವ್ಯಕ್ತಿಗಳನ್ನ ಯಾಮಾರಿಸಿ ಹೈಟೆಕ್ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಪೀಕಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ನಾಯಕಿ ವಿದ್ಯಾ ಎನ್ನುವವರು ಇದೀಗ ಹನಿಟ್ರ್ಯಾಪ್ ಆರೋಪದಲ್ಲಿ ಬಂಧಿತರಾಗಿರುವವರು. ಎಐಸಿಸಿ ಸದಸ್ಯೆ ಆಗಿರೋ ವಿದ್ಯಾ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಕೂಡ ಆಗಿದ್ದರೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾ, ತನ್ನ ಮೇಕ್ ಅಪ್ ಭರಿತ ಸೌಂದರ್ಯದ ಮೂಲಕವೇ ದೆಹಲಿ ನಾಯಕರನ್ನ ಸೆಳೆದು ಹನಿಟ್ರ್ಯಾಪ್ ಮಾಡುತ್ತಿದ್ದಳು ಎನ್ನಲಾಗಿದೆ.
ಐಎಫ್ಎಸ್, ಐಪಿಎಸ್, ಐಎಎಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಆರಂಭದಲ್ಲಿ ತನ್ನ ಬಣ್ಣದ ಮಾತುಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಫ್ರೆಂಡ್ ಶಿಪ್ ಹೆಸರಲ್ಲಿ ಮಾತನಾಡಿಸುತ್ತ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಆ ನಂತರ ತನ್ನ ಬಳಿ ವಿಡಿಯೋ ಇದೆ. ನಿಮ್ಮ ಫೋಟೋ ಇದೆ. ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಇದೆ. ಇಂತಿಷ್ಟು ದುಡ್ಡು ಕೊಡಬೇಕು, ಇಲ್ಲದಿದ್ರೆ ನಿಮ್ಮ ಮಾನವನ್ನ ಹರಾಜು ಮಾಡೋದಾಗಿ ಹೆದರಿಸುತ್ತಿದ್ದಳು ಎನ್ನಲಾಗಿದೆ.
ನಗರದ ಸಿವಿಲ್ ಕಾಂಟ್ರ್ಯಾಕ್ಟರ್ ಒಬ್ಬರಿಗೆ ಸಲುಗೆ ಬೆಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳಂತೆ. ಇದರಿಂದ ಗಾಬರಿಯಾದ ಆ ಕಾಂಟ್ರ್ಯಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದರು. ಕೇಸ್ ದಾಖಲು ಮಾಡಿಕೊಂಡಿದ್ದ ಪೊಲೀಸರು, ಕೊನೆಗೂ ಆರೋಪಿ ವಿದ್ಯಾಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.