ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಗುರುವಾರ ಆಯುಧ ಪೂಜೆ ಮತ್ತು ಶುಕ್ರವಾರ ವಿಜಯದಶಮಿ ಹಬ್ಬ ಆಚರಿಸಲಾಗುತ್ತಿದ್ದು, ಕಡಲನಗರಿ ಸಂಭ್ರಮದಿಂದ ಅಣಿಯಾಗುತ್ತಿದೆ. ಬೆಲೆ ಏರಿಕೆ ನಡುವೆಯೂ ನಗರ ಮತ್ತು ಹೊರವಲಯದ ಮಾರುಕಟ್ಟೆಗಳಲ್ಲಿ ಪೂಜೆಗಾಗಿ ಹೂವು, ಹಣ್ಣು ಖರೀದಿ ಭರಾಟೆಯು ಬಿರುಸು ಪಡೆದಿತ್ತು.
ಬಹುತೇಕ ಕಡೆ ರಸ್ತೆ ಬದಿಯಲ್ಲಿ ಉತ್ತರ ಕರ್ನಾಟಕದಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಬುಧವಾರ ಭರ್ಜರಿ ವ್ಯಾಪಾರ ನಡೆಸಿದ್ದಾರೆ. ಮುಂಜಾನೆಯಿಂದಲೇ ಲಾರಿಗಳಲ್ಲಿ ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂಗಳು ಮತ್ತು ಲಿಂಬೆ ಹಣ್ಣು ತಂದು ಅಲ್ಲಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಈ ಮಧ್ಯೆ ಹಲವು ಮಂದಿ ಬುಧವಾರವೇ ವಾಹನ, ಕಚೇರಿಗಳಲ್ಲಿ ಆಯುಧ ಪೂಜೆ ನಡೆಸಿದ್ದಾರೆ. ಇನ್ನು ಬಹುತೇಕ ಮಂದಿ ಗುರುವಾರ ಆಯುಧ ಪೂಜೆ ನಡೆಸುತ್ತಾರೆ. ಹೂವುಗಳಿಂದ ಅಲಂಕರಿಸಿದ ವಾಹನಗಳು, ಆಯುಧ, ಯಂತ್ರೋಪಕರಣ, ಕಂಪ್ಯೂಟರ್‌ಗಳಿಗೆ ಪೂಜೆ ನಡೆಯಲಿದೆ.
ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಭಕ್ತರು ದೇವಾಲಯಗಳಲ್ಲಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸುವುದು ಸಂಪ್ರದಾಯವಾಗಿದೆ. ಗ್ಯಾರೇಜ್, ಇಂಜಿಯರಿಂಗ್ ವರ್ಕ್ಸ್, ಪೊಲೀಸ್ ಠಾಣೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತಿತರ ಕಡೆ ಪೂಜೆ ನಡೆಯಲಿದೆ. ಕೊರೋನ ನಿಯಮಗಳನ್ನು ಪಾಲಿಸಿಕೊಂಡು ಪೂಜೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಅದರಂತೆ ಹಬ್ಬ ನಡೆಯಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ ನವದುರ್ಗೆಯರು, ಶಾರದೆ ಹಾಗು ಗಣಪತಿ ವಿಗ್ರಹಗಳಿಗೆ ಪೂಜೆ ನಡೆದು ದೇವಳದ ಸುತ್ತ ಪ್ರದಕ್ಷಿಣೆ ಹಾಕಿ ದೇವಳದ ಪುಷ್ಕರಿಣಿಯಲ್ಲಿ ವಿಸರ್ಜನೆ ನಡೆಯಲಿದೆ. ಕೊರೋನ ಹಿನ್ನೆಲೆಯಲ್ಲಿ ಈ ಬಾರಿಯೂ ವೈಭವದ ಶೋಭಾಯಾತ್ರೆ ನಡೆಸದಿರಲು ತೀರ್ಮಾನಿಸಲಾಗಿದೆ.