ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಜೂಜಾಟ, ಸ್ಕಿಲ್ ಗೇಮ್, ಬೆಟ್ಟಿಂಗ್‌ಗೆ ನಿಷೇಧ ಹೇರಿ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಕಾರ್ಯಾಚರಣೆ ಆರಂಭಿಸಿದ್ದು, ಜನಪ್ರಿಯ ಗೇಮಿಂಗ್ ಆ್ಯಪ್ ಡ್ರೀಮ್ 11 ತನ್ನ ಸೇವೆ ಸ್ಥಗಿತಗೊಳಿಸಿದೆ. ಈ ಮೂಲಕ ಆನ್‌ಲೈನ್ ಜೂಜು ವಿರುದ್ಧ ಸರಕಾರದ ಹೋರಾಟಕ್ಕೆ ದೊಡ್ಡ ಮಟ್ಟದ ಜಯ ಲಭಿಸಿದಂತಾಗಿದೆ.
ನಿಷೇಧ ಜಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಡ್ರೀಮ್ 11 ವಿರುದ್ಧ ಬೆಂಗಳೂರು ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದರು. ಮರುದಿನವೇ ಕರ್ನಾಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ರುವುದಾಗಿ ಡ್ರೀಮ್ 11 ಘೋಷಿಸಿದೆ.
“ಡ್ರೀಮ್ 11 ಆ್ಯಪ್‌ನಲ್ಲಿ ಕರ್ನಾಟಕದ ನಿವಾಸಿಗಳು ಇನ್ನು ಮುಂದೆ ಪೇ ಟು ಪ್ಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಆದರೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಡ್ರೀಮ್ 11ರಲ್ಲಿ ಸುರಕ್ಷಿತವಾಗಿರುತ್ತದೆ’ ಎಂಬ ಸಂದೇಶವನ್ನು ಆ್ಯಪ್ ಪ್ರಕಟಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಇತರ ಗೇಮಿಂಗ್ ತಾಣಗಳಾದ ಎಂಪಿಎಲ್, ಮೈ 11 ಸರ್ಕಲ್, ಗೇಮ್ ಝೂ, ಹೌಝಾಟ್ ಸೇರಿದಂತೆ 50ಕ್ಕೂ ಅಧಿಕ ಆ್ಯಪ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.