ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ!
ಮುತ್ತು ಬೆಳೆಯುವ ಪುತ್ತೂರ ಕೆರೆ
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ ಇದೆ. ಈ ದೇವಸ್ಥಾನದ ಸುತ್ತಮುತ್ತ ಆನೆ ಬರೋ ಹಾಗಿಲ್ಲ . ಒಂದು ವೇಳೆ ಅಪ್ಪಿ-ತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವಂತೆ..! ಹಾಗೊಂದು ಪ್ರತೀತಿ ಇದೆ..! ಇದಕ್ಕೊಂದು ಐತಿಹಾಸಿಕ ಕತೆಯಿದೆ.! ಅದೇನೆಂದು ಮುಂದೆ ಓದಿ.
ಹಿಂದೊಂದು ಕಾಲದಲ್ಲಿ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು, ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟೇ ಎಳೆದರೂ ಮೇಲೇಳಲಿಲ್ಲ..! ಆಗ ಏನೂ ತೋಚದೆ ಶಿವಲಿಂಗವನ್ನು ಎಳೆಯಲು ಆನೆಯನ್ನು ಕರೆಸಿದರಂತೆ..! ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವೇ ದೊಡ್ಡದಾಗ್ತಾ ಹೋಯಿತಂತೆ.! ಮಹತ್ತಾಗಿ ಬೆಳೆದ ಮಹಾಲಿಂಗವೇ ಈಗ ಪೂಜಿಸಲ್ಪಡುವ ಮಹಾಲಿಂಗೇಶ್ವರ..! ಸಿಕ್ಕಾಪಟ್ಟೆ ಜೋರಾಗಿ, ರಭಸದಿಂದ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ಎಲ್ಲಾಯ್ತಾ ಅಲ್ಲಿ, ದೂರ ದೂರವಾಗಿ ಎಸೆಯಲ್ಪಟ್ಟಿತು..! ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದ್ದಂತೆ..! ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದೆಡೆ ತಾಳೆಪಾಡಿ, ಕೈ ಬಿದ್ದಡೆ ಕೇಪಳ, ಬಾಲ ಬಿದ್ದ ಕಡೆಯಲ್ಲಿ ಬೀದಿಮಜಲು ಎಂದು ಹೆಸರಾಯಿತಂತೆ..! ಈ ಪವಾಡವನ್ನು ಕಂಡ, ಅಂದಿನ ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದರಂತೆ..!
ಗಜಪೃಷ್ಟಾಕಾರದ ಗರ್ಭಗುಡಿ
ಈ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ ಇಲ್ಲಿ ಪ್ರತಿಷ್ಠಾ ಪಿಸಿರುವ ನಂದೀಶ್ವರ.
ಇಲ್ಲಿರುವ ನಂದಿಗೆ ಇರುವುದು ಕೇವಲ ಮೂರು ಕಾಲು..!. ಈ ನಂದಿಗೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ಒಂದು ಬಸವ ದಿನಾವೂ ಬಂದು ಹಾಳು ಮಾಡುತ್ತಿತ್ತಂತೆ..! ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿತಂತೆ..! ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡ್ತಾನೆ ಮಹಾಲಿಂಗೇಶ್ವರ..! ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಕಾಣುತ್ತೇವೆ.! ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಅಂತ ಜನ ನಂಬಿದ್ದಾರೆ..!
ಮೂರು ಕಾಲಿನ ನಂದಿ
ಕಾಲಾನಂತರದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯ್ತು..!. ದೇವಾಲಯದ ಮುಂದೆ ನಾಗ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಗಳನ್ನು ಕಟ್ಟಿ ಪೂಜಿಸಲಾಯಿತು.
ದೇವಾಲಯದ ಹಿಂದೆ ನಿತ್ಯ ಹರಿದ್ವರ್ಣದ ಕೆರೆಯೊಂದಿದೆ. ಕಾರ್ತೀಕ ಮಾಸದಲ್ಲಿ ದೇವಸ್ಥಾನ, ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ನಡೆಸುತ್ತಾರೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ ನಂಬಿಕೆಯೊಂದು ಇದೆ..! ಈ ಮುತ್ತಿಗೊಂದು ಇನ್ನೊಂದು ಕತೆಯಿದೆ. ದೇವಾಲಯದ ಹಿಂದೆ ಕೆರೆ ನಿರ್ಮಾಣ ಮಾಡುತ್ತಿರುವಾಗ ಎಷ್ಟೇ ಆಳ ಅಗೆದರೂ ನೀರು ಕಾಣಲಿಲ್ಲ..! ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಿದರಂತೆ..! ಆಗ ಬ್ರಾಹ್ಮಣರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರು ಮುತ್ತೂರಾಯ್ತು..! ಕಾಲಕಳೆದಂತೆ ಮುತ್ತೂರು ಪುತ್ತೂರಾಯ್ತು..!
ಅಲಂಕೃತ ಮಹಾಲಿಂಗೇಶ್ವರ
ಹೀಗೆ ತನ್ನದೇ ಆದ ಇತಿಹಾಸವನ್ನು ಹೊಂದಿರುವ ದೇವಾಲಯ ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಮಹೋತ್ಸವ ಪ್ರತಿವರ್ಷ ಏಪ್ರಿಲ್ 10 ರಿಂದ 20 ರವರೆಗೆ ನಡೆಯುತ್ತೆ ರಥೋತ್ಸವ
ಪ್ರತಿ ವರ್ಷ ಏಪ್ರಿಲ್ 17 ರಂದು, ಪುನರ್ ಪ್ರತಿಷ್ಠಾಪನ ಉತ್ಸವ ಪ್ರತಿ ವರ್ಷ ಮೇಷ ಮಾಸ 30 ರಂದು ವಿಜ್ರುಂಭಣೆಯಿಂದ ನಡೆಯುತ್ತೆ.
ಜಾತ್ರೆ, ರಥೋತ್ಸವವಲ್ಲದೇ, ನಾಗರ ಪಂಚಮಿ (ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು) ,ಕದಿರು(ತೆನೆಉತ್ಸವ) ನಡೆಯುವುದು.ಗಣೇಶ ಚತುರ್ಥಿಯಂದು 108 ಕಾಯಿ ಗಣಹೋಮ ಜರಗಿ ನಂತರ ಮದ್ಯಾಹ್ನ ಮಹಾಪೂಜೆ ಜರಗುವುದು. ಅಶ್ವಯುಜ ಶುಕ್ಲ ಪಕ್ಷದ ಪಾಡ್ಯ ತಿಥಿಯಿಂದ ನವಮಿ ತಿಥಿಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ (ನವರಾತ್ರಿ),
ದೀಪಾವಳಿಯ ಬಲೀಂದ್ರ ಹಾಕುವುದು: ಅಶ್ವಯುಜ ಅಮಾವಾಸ್ಯೆ ತಿಥಿಯಂದು ಮೊದಲ್ಗೊಂಡು ದಿನಂಪ್ರತಿ ಹೊತ್ತು ಪೂಜೆ ಬಲಿ ಉತ್ಸವವು ಪತ್ತನಾಜೆವರೆಗೆ (ಮೇ ಅಂತ್ಯದವರೆಗೆ) ಜರಗುವುದು.
ಮಹಾರಥೋತ್ಸವ
ಪೂಕರೆ ಉತ್ಸವ: ಕಾರ್ತಿಕ ಮಾಸದ ಹಸ್ತನಕ್ಷತ್ರದ ದಿವಸ ನಡೆಯುವುದು.
ಲಕ್ಷದೀಪೋತ್ಸವ: ಕಾರ್ತಿಕ ಮಾಸದ ಅಮಾವಾಸ್ಯೆ ದಿನ ರಾತ್ರಿ ಉತ್ಸವ ನಡೆಯುತ್ತದೆ. ಮಕರ ಸಂಕ್ರಮಣದಂದು ಕುಂಭಾಬಿಷೇಕ, ಕನಕಾಭಿಷೇಕ, ಶಿವರಾತ್ರಿ ದಿನದಂದು ಉತ್ಸಹ ಹಾಗೂ ಕೆರೆಯಲ್ಲಿ ವಿಶೇಷವಾಗಿ ತೆಪ್ಪೋತ್ಸವ ವಿಜ್ರಂಭಣೆಯಿಂದ ಜರಗುತ್ತದೆ. ಬೆಳಗ್ಗಿನ ತನಕ ಭಜನೆ ಹಾಗೂ ಜಾಗರಣೆ ಭಕ್ತಾಧಿಗಳು ನೆರವೇರಿಸುತ್ತಾರೆ.
ಶ್ರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಮಯದಲ್ಲಿ ಎ.16 ರಂದು ಬಲ್ನಾಡು ದಂಡನಾಯಕ ಉಳ್ಳಾಲ್ತಿ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು. ನಂತರ ಉತ್ಸವ ಸಣ್ಣ ರಥೋತ್ಸವ ಪಾಲಕಿ (ಪಲ್ಲಕ್ಕಿ) ಉತ್ಸವ ಕೆರೆಯಲ್ಲಿ ಜರಗುತ್ತದೆ. ಪ್ರತಿ ವರ್ಷ ಎಪ್ರಿಲ್ 18ರಂದು ಜಾತ್ರೆ ಅಂಗವಾಗಿ ಬೆಳಿಗ್ಗೆ ತುಲಾಭಾರ ಸೇವೆ, ಸಾಯಂಕಾಲ ವೀರಮಂಗಲ ದೇವರು ಅವಭೃತ ಸ್ನಾನಕ್ಕೆ ಸವಾರಿ ಜರಗುತ್ತದೆ. ಮೇ ತಿಂಗಳ ಅಂತ್ಯದಲ್ಲಿ ಪ್ರತೀ ವರ್ಷ ದೇವರ ಬಲಿ ಉತ್ಸವವು ನಡೆದು ದೇವರ ಉತ್ಸವ ಮೂರ್ತಿಯನ್ನು ಪಾಣಿಪೀಠದಲ್ಲಿಟ್ಟು ಮಂಗಳಾರತಿ ನಡೆದ ನಂತರ ಉತ್ಸವ ಮುಕ್ತಾಯಗೊಳ್ಳುತ್ತದೆ. ಈ ಬಾರಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಸಾಧ್ಯ ಆದರೆ ಹೋಗಿ ಬನ್ನಿ, ಒಮ್ಮೆ ಹೋದರೆ ಉತ್ಸವ, ರಥೋತ್ಸವದ ಕಣ್ತುಂಬಿಕೊಂಡ ನೀವು ಮತ್ತೆ ಮತ್ತೆ ಪ್ರತಿವರ್ಷ ಹೋಗಿಯೇ ಹೋಗುತ್ತೀರಿ.
ಇನ್ನೊಂದು ವಿಶೇಷವೆಂದರೆ
ನೀವು ದೇವಾಲಯದ ನಡೆಯಲ್ಲಿ ನಿಂತು ಬೇಡಿಕೊಂಡರೆ, ನೀವು ಬೇಡಿದ್ದನ್ನ ಮಹಾಲಿಂಗೇಶ್ವರ ಕರುಣಿಸ್ತಾನೆ ಅನ್ನುವುದು ಭಕ್ತರ ನಂಬಿಕೆ.
ಮಹಾಲಿಂಗೇಶ್ವರ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ…
Stupendous! Exceptionally well written article on history of puttur.