ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನಾಳೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಈ ಹಿನ್ನೆಲೆ ಭಾರತೀಯ ವಾಯುಸೇನೆಯ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಯಳಂದೂರು ತಾಲ್ಲೂಕಿನ ವಡಗೆರೆ ಹಾಗೂ ಯಡಬೆಟ್ಟದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗಳನ್ನು ಪರಿಶೀಲಿಸಲಾಯಿತು.
ರಾಷ್ಟ್ರಪತಿ ಕೋವಿಂದ್ ಚಾಮರಾಜನಗರ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಚಾಮರಾಜನಗರದಲ್ಲಿ ಅಕ್ಟೋಬರ್ 7ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿ ರಂಗನ ಬೆಟ್ಟ, ಚಾಮರಾಜನಗರ ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. 15 ಕಿ. ಮೀ. ವ್ಯಾಪ್ತಿಯಲ್ಲಿ ಏರ್ ಬಲೂನ್ ಹಾರಾಟ, ಬ್ಯಾನರ್, ಮಾನವ ರಹಿತ ಏರ್ ಕ್ರಾಫ್ಟ್ ಬಳಕೆ, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಬಿಳಿಗಿರಿ ರಂಗನ ಬೆಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರಾಷ್ಟ್ರಪತಿಗಳ ಜೊತೆ ಪಾಲ್ಗೊಳ್ಳಲಿದ್ದು, ರಾಷ್ಟ್ರಪತಿಯವರನ್ನು ಸ್ವಾಗತಿಸಲಿದ್ದಾರೆ.
ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ, ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಪ್ರಯುಕ್ತ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಷ್ಟ್ರಪತಿ ಅ.7ರಂದು ನಗರಕ್ಕೆ ಬಂದು ವಾಸ್ತವ್ಯ ಮಾಡುವರು. ಅ. 8ರ ಸಂಜೆ ಮಂಗಳೂರಿನಿಂದ ನವದೆಹಲಿಗೆ ತೆರಳುವರು. ಈ ಸಂದರ್ಭದಲ್ಲಿ ವಸತಿ, ಊಟೋಪಚಾರ ಹಾಗೂ ಬಂದೋಬಸ್ತ್‌ಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ರಾಷ್ಟ್ರದ ಪ್ರಥಮ ಪ್ರಜೆಯ ವಾಸ್ತವ್ಯಕ್ಕೆ ಸಂಬಂಧಿಸಿ ಸಣ್ಣ ಲೋಪವೂ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಷ್ಟ್ರಪತಿ ವಾಸ್ತವ್ಯ ಮಾಡುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಅತಿಥಿ ಗೃಹ ಸಂಪೂರ್ಣ ಸಿಂಗಾರಗೊಳ್ಳಬೇಕು. ಅಂತಿಮ ಹಂತದ ಸಿದ್ಧತೆ ಪರಿಪೂರ್ಣವಾಗಿರಬೇಕು. ಸ್ಪಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಮಹಾನಗರ ಪಾಲಿಕೆ ವತಿಯಿಂದ ಅತಿಥಿ ಗೃಹದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ವಿಮಾನ ನಿಲ್ದಾಣದಿಂದ ಅತಿಥಿ ಗೃಹಕ್ಕೆ ಬರುವ ರಸ್ತೆಗಳಲ್ಲಿ ನ್ಯೂನತೆಗಳಿದ್ದಲ್ಲಿ ದುರಸ್ತಿಪಡಿಸಿಕೊಳ್ಳಬೇಕು ಎಂದು ಹೇಳಿದರು