ಮಂಗಳೂರು: ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮನೆಯಲ್ಲಿರಿಸಿದ್ದಾನೆಂದು ಆರೋಪಿಸಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆತನ ಮನೆ ಮುಂದೆ ಸೆ. 29ರಂದು ಕೊಳ್ತಿಗೆಯಲ್ಲಿ ಜಮಾಯಿಸಿದ ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕುಂಟಿಕಾನದ ಸಿದ್ದಿಕ್ ಎಂಬಾತನ ಮನೆಯಲ್ಲಿದ್ದಳು ಎಂದು ಹೇಳಲಾದ ಯುವತಿ ಅಪ್ರಾಪ್ತೆ ಎಂದು ಈ ಹಿಂದೆ ವರದಿಯಾಗಿತ್ತು. ಆತ ಆಕೆಯನ್ನು ಅಪಹರಿಸಿ ಮನೆಯಲ್ಲಿ ತಂದು ಕೂಡಿಹಾಕಿದ್ದಾಗಿ ಕೇರಳದ ಅದೂರು ಠಾಣೆಯಲ್ಲಿ ಯುವತಿ ಪೋಷಕರು ಕೇಸು ದಾಖಲಿಸಿದ್ದರು. ಆ ಬಳಿಕ ಇಬ್ಬರನ್ನೂ ಕೇರಳದ ಕಾಸರಗೋಡು ಜಿಲ್ಲೆಯ ಅದೂರು ಪೊಲೀಸರು ವಶಕ್ಕೆ ತೆಗೆದು ತನಿಖೆ ನಡೆಸಿದಾಗ ಆಕೆಯ ವಯಸ್ಸು ಹತ್ತೊಂಬತ್ತು ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಆಕೆಯನ್ನು ಕಾಸರಗೋಡಿನ ಪ್ರಥಮ ಧರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 18 ವರ್ಷ ದಾಟಿರುವ ಕಾರಣ ಆಕೆಯ ಇಛ್ಛೆಯಂತೆ ವ್ಯವಹರಿಸಲು ನ್ಯಾಯಾಲಯ ಆಕೆಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಯುವತಿಯೂ ಸಿದ್ದಿಕ್ ಜತೆಯೇ ತಾನೂ ಹೋಗುವುದಾಗಿಯೂ ಆತನನ್ನು ವರ್ಷ ವರಿಸುವುದಾಗಿಯೂ ಹಠ ಹಿಡಿಯುತ್ತಿರುವುದಾಗಿ ಹೇಳಲಾಗಿದೆ. ಈ ಪ್ರಕರಣ ತಿರುವು ಪಡೆಯುತ್ತಿದ್ದಂತೆ ಕಾಸರಗೋಡು ನ್ಯಾಯಾಲಯ ಮುಂಭಾಗ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು. ಸದ್ಯ ಯುವತಿ ಪೊಲೀಸರ ರಕ್ಷಣೆಯಲ್ಲಿ ಇರುವುದಾಗಿ ತಿಳಿದುಬಂದಿದೆ.
ಯುವತಿಯ ತಂದೆ ನೀಡಿದ ನಾಪತ್ತೆ ದೂರಿನಲ್ಲಿ ಹಾಗೂ ಯುವತಿ ಪೊಲೀಸ್ ತನಿಖೆಯ ವೇಳೆ ತಾನೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಎಂದು ಹೇಳಿದ ಹಿನ್ನಲೆಯಲ್ಲಿ ಆಕೆ ಅಪ್ರಾಪ್ತೆ ಎಂಬ ಶಂಕೆಗೆ ಕಾರಣವಾಗಿತ್ತು. ಆದರೇ ಆಕೆಗೆ ಎಂಟು ವರ್ಷವಾಗಿರುವಾಗ ಆಕೆಯನ್ನು ಶಾಲೆಗೆ ಸೇರಿಸಿದ್ದು ಅಕೆಯ ವಯಸ್ಸಿನ ಬಗ್ಗೆ ಗೊಂದಲ ಉಂಟಾಗಲು ಕಾರಣವಾಗಿತ್ತು. ಯುವಕ ಸಿದ್ದಿಕ್ ಸದ್ಯ ಅದೂರು ಠಾಣೆಯಲ್ಲಿದ್ದಾನೆ. ಇನ್ನೂ ಯುವತಿಯ ನಿರ್ಧಾರದ ಬಗ್ಗೆ ಗೊಂದಲ ಮುಂದುವರಿದಿದ್ದು ಯುವತಿ ತನ್ನ ಪೋಷಕರ ಜತೆ ಹೋಗುತ್ತಾಳಾ? ಅಥವಾ ಯುವಕನ ಜತೆ ತೆರಳುತ್ತಾಳಾ? ಎಂದು ಕಾದುನೋಡಬೇಕಿದೆ.