ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ಇಂಧನ ಸಚಿವರಾಗಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಕೇಸಿನ ವಿಚಾರದಲ್ಲಿ ಸಾಕ್ಷ್ಯ ಹೇಳಲು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು, ಅವರು ಹಾಜರಾಗದ ಹಿನ್ನಲೆಯಲ್ಲಿ ನ.06ಕ್ಕೆ ಮತ್ತೆ ವಾರೆಂಟ್ ಆಗಿದೆ
2016ನೆ ಇಸವಿಯಲ್ಲಿ ವಿದ್ಯುತ್ ಸಮಸ್ಯೆ ಕುರಿತಂತೆ ಬೆಳ್ಳಾರೆಯ ಸಾಯಿ ಗಿರಿಧರ ಎಂಬವರು ಅಂದು ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಗೆ ಫೋನ್ ಮಾಡಿ ಸುಳ್ಯದ ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ಕುಪಿತರಾದ ಶಿವಕುಮಾರ್, ಮೆಸ್ಕಾಂ ಎಂ.ಡಿ.ಗೆ ಹೇಳಿ ಸುಳ್ಯ ಮೆಸ್ಕಾಂ ಎಇಇ ಮೂಲಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಗಿರಿಧರ ರೈ ವಿರುದ್ಧ ದೂರು ಕೊಡಿಸಿದ್ದರು. ಈ ಕೇಸಿನಲ್ಲಿ ಡಿ.ಕೆ. ಶಿವಕುಮಾರ್ ರನ್ನು ಕೂಡ ಸಾಕ್ಷಿಯಾಗಿ ತೋರಿಸಲಾಗಿತ್ತು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯತೊಡಗಿತ್ತು. ಮೆಸ್ಕಾಂ ಎಂ.ಡಿ. ಚಿಕ್ಕಮುತ್ತಯ್ಯ ಮತ್ತಿತರ ಹಲವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದರು. ಆದರೆ ಶಿವಕುಮಾರ್ ಗೆ ಸಮನ್ಸ್ ಗಳಾಗಿದ್ದರೂ, ಕೋರ್ಟ್‌ಗೆ ಹಾಜರಾಗದ ಕಾರಣ ಸುಳ್ಯ ನ್ಯಾಯಾಧೀಶ ಸೋಮಶೇಖರ್ ರವರು ಡಿ. ಕೆ. ಶಿವಕುಮಾರ್ ಅವರಿಗೆ ವಾರೆಂಟ್ ಜಾರಿಗೊಳಿಸಿದ್ದಲ್ಲದೆ, ರಾಜ್ಯದ ಐಜಿಪಿ ಮತ್ತು ಡಿಐಜಿಗೆ ನೋಟಿಸ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಗಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿಯವರು ಇಮೇಲ್ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ನ.06 ರಂದು ಹಾಜರಾಗಲು ಡಿಕೆಶಿಯವರಿಗೆ ಮತ್ತೆ ವಾರೆಂಟ್ ಹೊರಡಿಸಲಾಗಿದ್ದು, ಅವರನ್ನು ಹಾಜರುಪಡಿಸಬೇಕೆಂದು ಪೊಲೀಸ್ ನಿರ್ದೇಶಕರಿಗೂ ವಾರೆಂಟ್ ಹೊರಡಿಸಿದ್ದಾರೆಂದು ತಿಳಿದುಬಂದಿದೆ.