ಪರಶುರಾಮ ಸೃಷ್ಟಿಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆ, ಭೂತಾರಾಧನೆಗಳು ಅನಾದಿಕಾಲದಿಂದ ನಡೆದು ಬಂದಿದೆ. ಜಾತಿ ಬೇಧವಿಲ್ಲದೇ ಎಲ್ಲರ ಆರಾಧನೆ, ಆಚರಣೆಗಳು ದೈವಶಕ್ತಿಗೆ ಅರ್ಪಿತವಾಗುತ್ತವೆ. ಇಂತಹ ಹಲವು ಸುಪ್ರಸಿದ್ದ ಕ್ಷೇತ್ರಗಳ ಪೈಕಿ ಮಂಗಳೂರಿನಿಂದ 100 ಕಿ.ಮೀ ಹಾಗೂ ತಾಲೂಕು ಕೇಂದ್ರವಾದ ಕಡಬದಿಂದ 20ಕಿ.ಮೀ ದೂರದಲ್ಲಿದೆ ಏನೆಕಲ್ಲು ಬಚ್ಚನಾಯಕ, ಉಳ್ಳಾಲ್ತಿ, ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರ. ನಾಗರಾಧನೆ ಜೊತೆಗೆ ದೈವಾರಾಧನೆ ಈ ಕ್ಷೇತ್ರದ ವಿಶೇಷತೆ. ಅದರಲ್ಲೂ ಇಲ್ಲಿ ನೆಲೆಸಿರುವ ಬಚ್ಚನಾಯಕ ದೈವಕ್ಕೆ ಬೆಳ್ಳಿ ಮೀಸೆಯೇ ಪ್ರದಾನ ಹರಿಕೆ. ಗುಡಿ, ಅತಿಶಯ ಕ್ಷೇತ್ರ ಇಲ್ಲಿನ ಸ್ಥಳ ಸಾನಿದ್ಯಗಳು.
ಪೌರಾಣಿಕ, ಐತಿಹ್ಯ ಹಿನ್ನೆಲೆ:
ಶ್ರೀ ಉಳ್ಳಾಕುಲು ಉಳ್ಳಾಳ್ತಿ ಹಾಗೂ ಬಚ್ಚನಾಯಕ ದೈವಸ್ಥಾನ
ದೇವಾಲಯದ ಪುರಾತನ ಇತಿಹಾಸ ಬಲು ರೋಚಕ ಮತ್ತು ಕುತೂಹಲಕಾರಿಯಾದದ್ದು.
ಹಿಂದೆ ಈ ಪ್ರದೇಶದಲ್ಲಿ ತಪಸ್ವಿಯೋರ್ವನಿಗೆ ಶಂಖಪಾಲನು ಪ್ರತ್ಯಕ್ಷಗೊಂಡು ಅವಿರ್ಭವಿಸಿನೆಂಬುದು ಇಲ್ಲಿನ ಪ್ರತೀತಿ. ಇದಲ್ಲದೇ ಜಾನಪದೀಯ ನಂಬುಗೆಯಲ್ಲಿ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ ರೋಚಕ ಕಥೆಯೊಂದಿದೆ. ರಾಜಾಳ್ವಿಕೆಯ ಆ ದಿನಗಳಲ್ಲಿ ಯೇನೆಕಲ್ಲು ಪ್ರದೇಶವು ಪಂಜದ ಬಲ್ಲಾಳನ ಆಳ್ವಿಕೆಗೆ ಒಳಪಟ್ಟಿತ್ತು. ಪಂಜದ ಬಲ್ಲಾಳನು ಅಳಿಯಕಟ್ಟಿನ ಪ್ರಕಾರ ತನ್ನಿಬ್ಬರು ತಂಗಿಯಂದಿರಿಗೆ ತನ್ನ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಸ್ವಲ್ಪ ಭಾಗವನ್ನು ನೀಡಿದನು. ಇದರಲ್ಲಿ ಪಂಜ ಸೀಮೆಯು ಅಕ್ಕನ ಆಡಳಿತಕ್ಕೂ, ಯೇನೆಕಲ್ಲಿನ ಐದು ಪ್ರದೇಶಗಳು ತಂಗಿಯ ಆಡಳಿತಕ್ಕೂ ಸೇರಿತ್ತು. ಯೇನೆಕಲ್ಲಿನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ಸೀಮೆ ದೇವಸ್ಥಾನವಿದೆ.
ಆ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವನ್ನು ಅಕ್ಕತಂಗಿಯರಿಬ್ಬರು ಸೇರಿಕೊಂಡು ನಡೆಸುವುದು ಒಪ್ಪಂದವಾಗಿತ್ತು. ಒಮ್ಮೆ ತಂಗಿಯ ಆಗಮನ ಸಮಯ ಮೀರಿತೆಂಬ ಕಾರಣದಿಂದ ಅಕ್ಕ ದೇವಸ್ಥಾನದ ಧ್ವಜಾರೋಹಣ ನಡೆಸಿ ಉತ್ಸವಕ್ಕೆ ಚಾಲನೆ ನೀಡಿದಳು. ಇದು ಅವರಿಬ್ಬರ ಮನಸ್ತಾಪಕ್ಕೆ ಕಾರಣವಾಯಿತು. ಅವಮಾನಿತಳಾಗಿ ತನ್ನ ಗಂಡನೊಂದಿಗೆ ಹಿಂದಿರುಗಿದ ತಂಗಿ ದೇವರ ಮೊರೆ ಹೋದಳು. ಮುಂದೊಂದು ದಿನ ಬೀಡಿನ ಸಮೀಪದ ಬಯಲ ಪೊದೆಯಲ್ಲಿ ಸಾಮಾನ್ಯವಾಗಿ ಬೆಳೆದ ಹುತ್ತವೊಂದಕ್ಕೆ ಬೀಡಿನ ಕಪಿಲೆ ಮೊಲೆ ಹಾಲೂಣಿಸುವುದನ್ನು ಪಂಜದ ಬಲ್ಲಾಳನು ಪ್ರತ್ಯಕ್ಷವಾಗಿ ಕಂಡನು. ನಂತರ ಈತ ಶಂಖಪಾಲ ಸ್ವಾಮಿಯನ್ನು ಯೇನೆಕಲ್ಲಿನಲ್ಲೇ ಪ್ರತಿಷ್ಠಾಪಿಸಿದನು ಎಂಬುದು ಐತಿಹ್ಯ.
ಬೆಳ್ಳಿಮೀಸೆ ಪ್ರಿಯ ಬಚ್ಚನಾಯಕ: ಮೂಲತಃ ಘಟ್ಟದ ಮೇಲಿನ ದೈವ ಎಂದು ಕರೆಯಲ್ಪಡುವ ಬಚ್ಚನಾಯಕ ಏನೆಕಲ್ಲಿನ ಕಾರಣಿಕ ಮೂರ್ತಿ. ಉಳ್ಳಾಲ್ತಿ ದೈವದ ಬಂಟನಾಗಿರುವ ಈ ದೈವಕ್ಕೆ ಬೆಳ್ಳಿ ಮೀಸೆ ಒಪ್ಪಿಸುವುದಾಗಿ ಹರಕೆ ಹೇಳಿಕೊಂಡರೆ ಅಸಾಧ್ಯವಾದುದನ್ನೂ ಸಾಧಿಸಿ ತೋರಿಸುತ್ತದೆ ಎಂಬುದು ಭಕ್ತರ ನಂಬಿಕೆ. ಪ್ರತೀವರ್ಷ ನಡೆಯುವ ಜಾತ್ರೆಯಲ್ಲಿ ಹಲವು ಭಕ್ತರಿಂದ ಮೀಸೆ ಹರಕೆ ಸಂದಾಯವಾಗುತ್ತದೆ.
ಅತಿಶಯ ಕ್ಷೇತ್ರ, ದೇವಾಲಯದ ಪುರಾತನ ಮೂರ್ತಿಶಿಲ್ಪ ಹಾಗೂ ವಿಗ್ರಹಗಳ ಕುರುಹು:
ಏನೆಕಲ್ಲಿನ ಬದಿವನ ಎಂಬಲ್ಲಿ ತಲಕಾಡು ಗಂಗರ ರಾಜಾಲಾಂಛನದಿಂದ ಕೂಡಿದ್ದ ದಂಬೆಕಲ್ಲು ಇದೆ. ನಡುಗಲ್ಲು ಎಂಬಲ್ಲಿ ಸ್ತಂಭಕಲ್ಲು ಇದ್ದು ಈಗ ಇಲ್ಲವಾಗಿದೆ. ಅಲ್ಲದೇ ಕಡಮಕಲ್ಲು ಎಂಬ ಊರಿನಲ್ಲಿಯೂ ಸ್ತಂಭಕಲ್ಲೊಂದಿದ್ದು ಇದು ಸುಬ್ರಹ್ಮಣ್ಯ ಗ್ರಾಮವನ್ನು ವಿಭಜಿಸುವ ತಲಕಾಡಿನ ಗಂಗರ ರಾಜ್ಯಾವಿಸ್ತಾರದ ಕಲ್ಲುಗಳು ಎಂಬುದು ಇತಿಹಾಸಕಾರರ ಅಭಿಪ್ರಾಯ. ಈ ದೇವಾಲಯದ ಪೂರ್ವಕ್ಕೆ ಮುತ್ಲಾಜೆ-ಕಲ್ಕುದಿ ಬೈಲಿನ ಎತ್ತರದ ಭೂತೊಳೆ ಗುಡ್ಡದ ತುತ್ತತುದಿಯಲ್ಲಿ ಲಿಂಗಮುದ್ರೆಯಿದೆ. ಈ ಕಲ್ಲಿನಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಾಗಿ ಶಿವಲಿಂಗದ ಉಬ್ಬು ಚಿತ್ರಣವಿದೆ. ಪಶ್ಚಿಮಕ್ಕೆ ಬಾನಡ್ಕ,ಎಣ್ಣೆಮಜಲು ಕಾಡಿನ ಮಧ್ಯದಲ್ಲಿ ಬೀರಿಕಾಡು ಎಂಬಲ್ಲಿಯೂ ಇದೇ ಶಿವಲಿಂಗದ ಮುದ್ರೆಯಿದೆ. ನೈರುತ್ಯಕ್ಕೆ ನವಿಲುಮುದ್ರೆಯಿದ್ದು ಇದರಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಲ್ಲಿ ಬರಹವಿದ್ದು, ಚಿ|ರಾ||ರಾಜದೇವರಾಜ ಋಷಿ ಪೀಠಂ ಎಂಬ ಶಿಲಾಫಲಕವಿದೆ. ಸದ್ಯ ಈ ಫಲಕ ಅಧ್ಯಯನಕ್ಕೆ ಪೂರಕವಾಗಿ ಮಂಗಳೂರು ವಿವಿ ಯಲ್ಲಿದೆ. ಈಗಿನ ಪರ್ಲ.ಹೊಸಂಗಡಿಯಲ್ಲಿ ಜೈನರ ಬಸದಿ ಹಾಗೂ ಪಾರ್ಶ್ವನಾಥನ ವಿಗ್ರಹದಲ್ಲಿ ಐದು ಹಡೆಯ ಸರ್ಪ ಹಾಗೂ ಮೌನ ವ್ರತಸ್ಥ ಶಿಲಾವಿಗ್ರಹವು ಇದೆ. ಉಜಿರ್ಕೋಡಿ ಎಂಬಲ್ಲಿ ಮಂಟಮೆ ಎಂದು ಕರೆಯಲ್ಪಡುವ ಕಟ್ಟೆಯೊಂದಿದ್ದು,ಹಿಂದಿನ ಕಾಲದ ನ್ಯಾಯ ತೀರ್ಮಾನದ ಕಟ್ಟೆ ಎಂದು ಹೇಳಲಾಗುತ್ತಿದೆ.
ಸ್ಥಳ ಸಾನಿಧ್ಯಗಳು:
ನಾಗಬನ
ಈ ಪ್ರದೇಶದಲ್ಲಿ ನಾಗರಾಧನೆಗೆ ವಿಶೇಷವಾದ ಪ್ರಾಶಸ್ತ್ಯ ವಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟಿರುವ ನಾಗಸ್ಥಾನ ದೇವಸ್ಥಾನದ ವಾಯುವ್ಯ ದಿಕ್ಕಿನಲ್ಲಿಯೂ, ಮದುವೆ ಬದುವಿನಲ್ಲಿಯೂ ಇದೆ. ದೈವಸ್ಥಾನಕ್ಕೆ ಸಂಬಂಧಪಟ್ಟ ನಾಗಸ್ಥಾನ ದಕ್ಷಿಣದಿಕ್ಕಿನಲ್ಲಿಯೂ ಇದೆ.
ಅತಿಶಯ ಕ್ಷೇತ್ರ: ದೇವಾಲಯದ ಸಮೀಪದಲ್ಲೇ ಹರಿಯುವ ನದಿಯಲ್ಲಿ
ದೇವರಮೀನು ಎಂದು ಕರೆಯಲ್ಪಡುವ ಮಹಶೀರ್ ಮೊದಲಾದ ಹಲವು ಮೀನುಗಳು ಕಣ್ಮನವನ್ನು ಸೆಳೆಯುತ್ತವೆ. ಇದನ್ನು ಕಾಪುಕಯ ಎಂತಲೂ ದೇವರಗುಂಡಿ ಎಂತಲೂ ಕರೆಯುತ್ತಾರೆ.
ಮಾರ್ಗಸೂಚಿ: ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 35 ಕಿ.ಮೀ ಅಥವಾ ಕುಕ್ಕೆ ಸುಬ್ರಹ್ಮಣ್ಯದಿಂದ 6 ಕಿ.ಮೀ ಕ್ರಮಿಸಿದರೆ ಏನೆಕಲ್ಲು ತಲುಪಬಹುದು. ಇಲ್ಲಿನ ಪ್ರಕೃತಿ ರಮಣೀಯತೆ ನಡುವೆ ನೆಲೆನಿಂತಿರುವ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ್ತಿ ಬಚ್ಚನಾಯಕ ದೈವಸನ್ನಿದಿಯನ್ನು ಸೇರಬಹುದಾಗಿದೆ.