ಕಾಬೂಲ್, ಸೆ.29- ಆಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮೊದಲ ಬಾರಿಗೆ ತಾಲಿಬಾನಿಗಳು ಭಾರತ ಸರ್ಕಾರದೊಂದಿಗೆ ಸಂಪರ್ಕ ಸಾಸಿದ್ದು, ಎರಡೂ ದೇಶಗಳ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಆಫ್ಘಾನಿಸ್ಥಾನದ ವಿಮಾನಯಾನ ಹಂಗಾಮಿ ಸಚಿವ ಹಮೀದುಲ್ಲಾ ಅಕುಂದಾ ಅವರು ಭಾರತದ ವಿಮಾನಯಾನದ ಮಹಾ ನಿರ್ದೇಶಕ ಅರುಣ್‍ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಎರಡೂ ದೇಶಗಳ ನಡುವೆ ಈ ಮೊದಲಿನಂತೆ ವಿಮಾನ ಸಂಚಾರ ಆರಂಭಿಸಬೇಕು ಎಂದು ಅಕುಂದಾ ಪತ್ರದಲ್ಲಿ ಸಲಹೆ ನೀಡಿದ್ದಾರೆ.
ಕಾಬುಲ್ ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಜತೆಗೆ ಅಮೆರಿಕ ಪಡೆಗಳು ಆಫ್ಘಾನಿಸ್ತಾನ ಬಿಟ್ಟು ಹೋಗುವಾಗ ವಿಮಾನ ನಿಲ್ದಾಣ ಮತ್ತು ಅಲ್ಲಿನ ವಿಮಾನಗಳನ್ನು ಹಾನಿ ಮಾಡಿದ್ದರು ಎಂಬ ಆರೋಪಗಳಿವೆ.