ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದುರಂತವೊಂದು ಸಂಭವಿಸಿದ್ದು, ಮೂರು ಅಂತಸ್ತಿನ ಕಟ್ಟಡ ಕಣ್ಣೆದುರಲ್ಲೇ ಕುಸಿದು ಬಿದ್ದಿರುವ ಘಟನೆ ಲಕ್ಕಸಂದ್ರದಲ್ಲಿ ನಡೆದಿದೆ.
ಮೆಟ್ರೋ ಕಾಮಗಾರಿಗೆ ಆಗಮಿಸಿದ್ದ ಕಾರ್ಮಿಕರು ವಾಸವಾಗಿದ್ದ ಬಹುಮಹಡಿ ಕಟ್ಟಡ ಸಂಪೂರ್ಣ ನೆಲಸಮವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
1974ರಲ್ಲಿ ನಿರ್ಮಿಸಲಾಗಿದ್ದ ಹಳೆ ಕಟ್ಟಡ ಇದಾಗಿದ್ದು, ಮೂರು ಅಂತಸ್ಥಿನ ಕಟ್ಟಡವಾಗಿತ್ತು. ಕಟ್ಟಡ ತೆರವುಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತೆರವುಗೊಳಿಸುವುದಕ್ಕಿಂತಲೂ ಮೊದಲೇ ಕಟ್ಟಡ ನೋಡನೋಡುತ್ತಿದ್ದಂತೆಯೇ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುವ ಅಪಾಯವಿರುವುದರಿಂದ ಮೆಟ್ರೋ ಕಾರ್ಮಿಕರನ್ನು ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಹಾಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಿಂದಾಗಿ ಅಕ್ಕ-ಪಕ್ಕದ ಮನೆಗಳಿಗೆ ಹಾನಿಯುಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.