ಮಡಿಕೇರಿ: ಇವನಿಗೆ ಮದುವೆ ಆಗೋದೆ ಒಂದು ಖಯಾಲಿ. ಮದುವೆ ಆಗೋದು, ಒಂದೆರಡು ವರ್ಷ ಅವರೊಂದಿಗೆ ಸಂಸಾರ ಮಾಡೋದು, ಬಳಿಕ ಅವರನ್ನು ಬಿಟ್ಟು ಬೇರೆ ಮದುವೆ ಆಗೋದು. ಇದರಿಂದ ಸಂಸಾರದ ಕನಸುಗಳನ್ನು ಕಂಡು ಜೀವನ ಕಳೆಯಲು ಬಯಸುವ ಯುವತಿಯರು ಇವನಿಂದ ಮೋಸ ಹೋಗತ್ತಲೇ ಇದ್ದಾರೆ.
ಮದುವೆಯನ್ನೇ ವೃತ್ತಿ ಮಾಡುತ್ತಿರುವ ಭೂಪ ಇರೋದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯತಿಯ ದಬ್ಬಡ್ಕದಲ್ಲಿ. ಪ್ರದೀಪ್ ಎಂಬಾತನೇ ಯುವತಿಯರಿಗೆ ಮೋಸ ಮಾಡುತ್ತಿರುವ ಆಸಾಮಿ.
ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಯುವತಿಯೋರ್ವಳನ್ನು 2017ರ ಆಗಸ್ಟ್ ನಲ್ಲಿ ಮದುವೆ ಆಗಿದ್ದಾನೆ. ಒಂದು ಮಗುವಾಗುತ್ತಲೇ ಇನ್ನಿಲ್ಲದ ಚಿತ್ರಹಿಂಸೆ ಕೊಡಲು ಆರಂಭಿಸಿದ್ದ ಪ್ರದೀಪ್, ನೀನು ತೋಟದಲ್ಲಿ ಕೂಲಿ ಕೆಲಸ ಮಾಡು ಇಲ್ಲವೇ ನಿನ್ನನ್ನು ಸಾಕೋದಕ್ಕೆ ನನ್ನಿಂದ ಆಗಲ್ಲ. ಮನೆ ಖಾಲಿ ಮಾಡು, ಇಲ್ಲವೇ ನಾನೇ ನಿನ್ನನ್ನು ಮತ್ತು ಮಗುವನ್ನು ಕತ್ತರಿಸಿ ಹೊಳೆಗೆ ಹಾಕಿಬಿಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದನಂತೆ. ಇಂತಹದ್ದೇ ಚಿತ್ರಹಿಂಸೆಯಿಂದ ರೋಸಿಹೋಗಿದ್ದ ಆಕೆಯನ್ನು ಅವರ ತಂದೆ ತಾಯಿ ತಮ್ಮ ಮನೆಗೆ ಕರೆದು ತಂದಿದ್ದಾರೆ.
ಹೆಂಡತಿ ತನ್ನ ಚಿಕ್ಕ ಮಗುವಿನೊಂದಿಗೆ ತವರು ಮನೆ ಸೇರುತ್ತಲೇ ಅತ್ತ ಪ್ರದೀಪ್ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನಂತೆ. ಅಷ್ಟಕ್ಕೂ ಈತ ಇದೊಂದೆ ಮದುವೆ ಆಗಿರುವುದಲ್ಲ, ಪೆರಾಜೆಯ ಯುವತಿಯನ್ನು ಮದುವೆಯಾಗುವುದಕ್ಕೂ ಮೊದಲೇ ಒಂದು ಮದುವೆಯಾಗಿ, ಆಕೆಗೂ ಡೈವೋರ್ಸ್ ಕೊಟ್ಟಿದ್ದನಂತೆ. ಅಲ್ಲದೆ ನನ್ನನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ಇರುವಾಗ ಕೋಲಾರದ ಹುಡುಗಿಯನ್ನು ಮದುವೆಯಾಗಿದ್ದಾನೆ ಅನ್ನೋದು ಎರಡನೇ ಪತ್ನಿಯ ಆರೋಪ. ಪ್ರದೀಪನಿಂದ ನೊಂದಿರುವ ಈಕೆ ನನಗೆ ಆತನಿಂದ ಮುಕ್ತಿ ಬೇಕು, ಡಿವೋರ್ಸ್ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಡೈವೋರ್ಸ್ ಆಗುವ ಮುನ್ನವೇ ಇದೀಗ ಕಡಬದಲ್ಲಿ ಮತ್ತೊಂದು ಮದುವೆ ಆಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನಂತೆ.
ಇದರ ನಡುವೆ ಅಂಗನವಾಡಿ ಶಿಕ್ಷಕಿಯೊಬ್ಬರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಪ್ರದೀಪ್ ಅಂಗನವಾಡಿ ಶಿಕ್ಷಕಿಯೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳನ್ನು ಪವಿತ್ರ ಅವರು ಮಾಧ್ಯಮಗಳಿಗೆ ನೀಡಿದ್ದಾರೆ. ಮೊದಲ ಹೆಂಡತಿ ಡೈವೋರ್ಸ್ ಆಗಿದೆ. ನನಗೆ ಅಪ್ಪ, ಅಮ್ಮ ಇಲ್ಲ ಅಂತ ನಾಟಕವಾಡಿ ಏನೂ ಅರಿಯದ ನನ್ನ ಮಗಳನ್ನು ಒತ್ತಾಯ ಪೂರ್ವಕವಾಗಿ ಮದುವೆಯಾದ. ಅವಳ ಬಾಳನ್ನು ಹಾಳು ಮಾಡಿದ. ಕೇಳಿದರೆ ಇರುವ ಮಗುವಿನ ಡಿಎನ್‍ಎ ಟೆಸ್ಟ್ ಮಾಡಬೇಕು. ನಿನ್ನ ಮತ್ತು ಮಗುವಿನ ಮೇಲೆ ನಂಬಿಕೆ ಇಲ್ಲ ಎನ್ನುತ್ತಿದ್ದಾನಂತೆ. ಇದೀಗ ಕಡಬದಲ್ಲಿ ಮತ್ತೊಂದು ಹುಡುಗಿಯನ್ನು ಮದುವೆ ಆಗುವುದಕ್ಕೆ ಪ್ರಯತ್ನಿಸುತ್ತಿದ್ದಾನೆ. ದಯವಿಟ್ಟು ಯಾರೂ ಮೋಸ ಹೋಗಬೇಡಿ ಎಂದು ಪ್ರದೀಪನಿಂದ ನೊಂದಿರುವ ಆತನ ಹೆಂಡತಿ ಮತ್ತು ಆಕೆ ತಾಯಿ ಬೇಡಿಕೊಂಡಿದ್ದಾರೆ.