ಬೆಂಗಳೂರು: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‌ಗೆ ಕರೆ ಕೊಟ್ಟಿದೆ. ಆದರೆ, ಈ ಭಾರತ್ ಬಂದ್ ಯಶಸ್ಸು ಕಾಣುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹೇಳಳಾಗುತ್ತಿದೆ. ಸಂಘಟನೆಗಳು ರೈತರಿಗೆ ನೈತಿಕ ಬೆಂಬಲ ನೀಡುವುದಾಗಿ ಹೇಳುತ್ತಿವೆ. ಆದರೆ, ಬಂದ್’ಗೆ ಆಸಕ್ತಿ ತೋರುತ್ತಿಲ್ಲ.
ರೈತರು ಕರೆ ಕೊಟ್ಟಿರುವ ಬಂದ್‌ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದ್ದು, ಸಂಪೂರ್ಣ ಬೆಂಬಲ ನೀಡಿಲ್ಲ. ಹೀಗಾಗಿ ನಾಳೆ ಎಂದಿನಂತೆ ಹೋಟೆಲ್ ಓಪನ್ ಇರಲಿದೆ. ಅಲ್ಲದೇ, ಕೆಎಸ್‌ಆರ್’ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವೂ ಬಂದ್‌ನಿಂದ ದೂರ ಉಳಿದಿದ್ದು, ಎಂದಿನಂತೆ ಬಸ್ ಓಡಿಸಲು ನೌಕರರು ನಿರ್ಧರಿಸಿದ್ದಾರೆ. ಅಲ್ಲದೇ ಲಾರಿ ಮಾಲೀಕರ ಸಂಘಟನೆ ಕೂಡಾ ನೈತಿಕ ಬೆಂಬಲವಷ್ಟೇ ನೀಡಿದ್ದು, ನಾಳೆ ಎಂದಿನಂತೆ ಲಾರಿಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದೆ. ನಮ್ಮ ಮೆಟ್ರೋ ಕೂಡಾ ಎಂದಿನಂತೆ ಸಂಚರಿಸಲಿದೆ. ರಾಜ್ಯ ಟ್ಯಾಕ್ಸಿ ಮಾಲೀಕರ ಸಂಘಟನೆಯೂ ಬಂದ್‌ಗೆ ಬೆಂಬಲ ನೀಡಿಲ್ಲ. ಹೀಗಾಗಿ ಓಲಾ ಉಬರ್ ಸೇರಿ ಎಲ್ಲಾ ರೀತಿಯ ಟ್ಯಾಕ್ಸಿಗಳು ಸಂಚರಿಸಲಿವೆ.
ಆಟೋ ಡ್ರೈವರ್ಸ್ ಯೂನಿಯನ್ ಮತ್ತು ಆಟೋ ಚಾಲಕರ ಸಂಘವೂ ನೈತಿಕ ಬೆಂಬಲವಷ್ಟೇ ನೀಡಿದ್ದು, ನಾಳೆ ಆಟೋ ಸಂಚಾರ ಇರಲಿದೆ. ಬೀದಿಬದಿ ವ್ಯಾಪಾರಿಗಳು ಕೂಡಾ ಕೊರೋನಾದಿಂದ ಕಂಗೆಟ್ಟು ಹೋಗಿದ್ದು, ಮತ್ತೊಂದು ಬಂದ್ ಮಾಡೋಕೆ ಆಸಕ್ತಿ ತೋರುತ್ತಿಲ್ಲ.
ಇನ್ನು ಮಕ್ಕಳು ವರ್ಷದ ಬಳಿಕ ಶಾಲೆಗಳ ಮುಖ ನೋಡುತ್ತಿದ್ದು, ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಾಲಾ ಕಾಲೇಜು ಬಂದ್ ಮಾಡದೇ ಇರಲು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ನಿರ್ಧರಿಸಿದೆ.
ಬೆಂಗಳೂರು ವಕೀಲರ ಸಂಘಟನೆಯೂ ನೈತಿಕ ಬೆಂಬಲ ನೀಡಿದ್ದು, ಕೋರ್ಟ್ ಕಲಾಪಗಳು ಎಂದಿನಂತೆ ನಡೆಯಲಿವೆ. ರೈತರ ಹೋರಾಟಕ್ಕೆ ಕರವೇ ನಾರಾಯಣಗೌಡ ಬಣವೂ ಕೂಡಾ ನೈತಿಕ ಬೆಂಬಲ ನೀಡಿದ್ದು, ಬಂದ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಈಗಷ್ಟೇ ಕೊರೋನಾದಿಂದ ಪರಿಸ್ಥಿತಿ ಸುಧಾರಿಸುತ್ತಿದ್ದು, ಬಂದ್ ನಿಂದ ಮತ್ತೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಮತ್ತೆ ಬಂದ್ ಬೇಡ ಎಂದು ಸಾಕಷ್ಟು ಸಂಘಟನೆಯ ಮುಖಂಡರು ಹೇಳುತ್ತಿದ್ದಾರೆ.
ಇನ್ನುಳಿದಂತೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಮತ್ತು ಎಪಿಎಂಸಿ ವರ್ತಕರ ಸಂಘದವರು ಮಾತ್ರ ಬಂದ್‌ಗೆ ಬೆಂಬಲ ನೀಡಿದ್ದಾರೆ.
ಹೆದ್ದಾರಿ ತಡೆಯಲು ಪ್ರತಿಭಟನಾಕಾರರು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ, ರಸ್ತೆ ತಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ.
ಸೋಮವಾರ ರಾಜಧಾನಿಯಲ್ಲಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ, ಮೆರವಣಿಗೆ, ಹೆದ್ದಾರಿ ಬಂದ್‌ಗೆ ಸಿದ್ಧತೆ ನಡೆದಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಕೆ.ಆರ್. ಮಾರುಕಟ್ಟೆಯಿಂದ ಟೌನ್ ಹಾಲ್ವರಗೆ ಸಾವಿರಾರು ರೈತರು ಜಾಥಾ ನಡೆಸಲಿದ್ದಾರೆ.