ನವದೆಹಲಿ: ಷೇರು ಮಾರುಕಟ್ಟೆ ಶುಕ್ರವಾರ ಹೊಸ ಇತಿಹಾಸ ಸೃಷ್ಟಿಸಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 338 ಅಂಕಗಳ ಜಿಗಿತದೊಂದಿಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ 60 ಸಾವಿರ ಗಡಿ ದಾಟಿದೆ. ಭಾರತೀಯ ಷೇರು ಮಾರುಕಟ್ಟೆ ಇದೇ ಮೊದಲ ಬಾರಿಗೆ 60 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 100 ಅಂಕಗಳ ಜಿಗಿತದೊಂದಿಗೆ ದಾಖಲೆಯ 17,923.35 ನಲ್ಲಿ ವಹಿವಾಟು ನಡೆಸುತ್ತಿದೆ. ಗುರುವಾರ 958 ಪಾಯಿಂಟ್ಗಳ ಏರಿಕೆ ಕಂಡು ಸೆನ್ಸೆಕ್ಸ್ 59,885ಕ್ಕೆ ಏರಿಕೆಯಾಗಿತ್ತು. ಮತ್ತು ನಿಫ್ಟಿ 17.823 ಮಟ್ಟದಲ್ಲಿ 276 ಪಾಯಿಂಟ್ಗಳ ಏರಿಕೆ ಕಂಡಿತ್ತು.
ಫೆಬ್ರವರಿ 3 ರಂದು ಷೇರು ಸೆನ್ಸೆಕ್ಸ್ 50,000 ಗಡಿಯನ್ನ ದಾಟಿತ್ತು. ಇದಾದ ನಂತರ ಅಂದರೆ 8 ತಿಂಗಳೊಳಗೆ 10,000 ಅಂಕಗಳಷ್ಟು ಜಿಗಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಷೇರು ಮಾರುಕಟ್ಟೆ ಕುಸಿಯುವ ಮುನ್ಸೂಚನೆಯನ್ನ ತಜ್ಞರು ನೀಡಿಲ್ಲ. ಏಕೆಂದರೆ ವಿದೇಶಿ ಹೂಡಿಕೆದಾರರ ಖರೀದಿ ಮುಂದುವರಿದಿದೆ.