ಉಡುಪಿ: ಜಿಲ್ಲೆಯ ಉದ್ಯಾವರ ಬಳಿ, ಪಾಪಾನಾಶಿನಿ ನದಿ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರುವ ಹಿನ್ನಲೆ ಈ ದುಷ್ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳ ಬಳಿ ಗ್ರಾಮಸ್ಥರು ತೆಂಗಿನಕಾಯಿ ಮುಟ್ಟಿಸಿ ಪ್ರಮಾಣ ಮಾಡಿಸಿದ ಘಟನೆ ಸೆ. 24 ರಂದು ನಡೆದಿದೆ.
ಇಲ್ಲಿನ ಪಿತ್ರೋಡಿ ಹೊಳೆಯಲ್ಲಿ ರಾಶಿ ರಾಶಿ ಪ್ರಮಾಣದಲ್ಲಿ ಮೀನುಗಳು ಸತ್ತು ಬಿದ್ದಿವೆ. ಇದಕ್ಕೆ ಸ್ಥಳೀಯ ಫಿಶ್ ಮೀಲ್ ಫ್ಯಾಕ್ಟರಿಯಿಂದ ಹೊರಗೆ ಬರುವ ತ್ಯಾಜ್ಯವೇ ಕಾರಣ. ಆದರೆ ಪ್ರತಿ ಬಾರಿ ಅಧಿಕಾರಿಗಳು ಫ್ಯಾಕ್ಟರಿ ಪರವಾಗಿ ಸುಳ್ಳು ವರದಿ ಕೊಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಹೀಗಾಗಿ ಗುರುವಾರ ಪರಿಸರ ಅಧಿಕಾರಿಗಳಾದ ವಿಜಯ ಹೆಗ್ಡೆ, ಪ್ರಮೀಳಾ, ಮೀನುಗಾರಿಕಾ ಇಲಾಖೆಯ ಅಧಿಕಾರಿ ದಿವಾಕರ ಖಾರ್ವಿ ಸ್ಥಳಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡು ನಿಷ್ಪಕ್ಷಪಾತವಾದ ಕ್ರಮ ಕೈಗೊಳ್ಳುವುದಾಗಿ ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡುವಂತೆ ಆಗ್ರಹಿಸಿದರು. ಅಧಿಕಾರಗಳು ಮುಜುಗರಕ್ಕೊಳಗಾದರೂ ಕೊನೆಗೆ ಅನಿವಾರ್ಯವಾಗಿ ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ್ದಾರೆ
ಈ ತೆಂಗಿನಕಾಯಿಯನ್ನು ಮುಂದೆ ಊರ ದೈವಸ್ಥಾನಕ್ಕೆ ಜನ ನೀಡಲಿದ್ದಾರೆ. ತೆಂಗಿನ ಕಾಯಿಯನ್ನು ಮುಟ್ಟಿ ಪ್ರಮಾಣ ಮಾಡಿ ಮಾತು ತಪ್ಪಿದರೆ, ವಿನಾಶ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆ ಇರುವುದರಿಂದ ಅಧಿಕಾರಿಗಳಿಗೆ ಈ ಮೂಲಕ ಜನ ಎಚ್ಚರಿಸಿದ್ದಾರೆ.