ಮೈಸೂರು: ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಮೈಸೂರು ಗ್ಯಾಂಗ್‍ರೇಪ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಸಂತ್ರಸ್ತೆ ಗುರುವಾರ(ಸೆ.23)ರಂದು 2ನೇ ಜೆಎಂಎಫ್‍ಸಿ ನ್ಯಾಯಾಧೀಶರ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಸೆಕ್ಷನ್ 164 ಅಡಿಯಲ್ಲಿ ಯುವತಿಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ಸುಮಾರು 45 ನಿಮಿಷಗಳ ಕಾಲ ಯುವತಿ ಹೇಳಿಕೆ ನೀಡಿದ್ದಾಳೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಸೆಪ್ಟೆಂಬರ್ 7ರಂದು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮೈಸೂರಿನ ಮೂರನೇ ಜೆಎಮ್ಎಫ್ಸಿ ಕೋರ್ಟ್‌ನ ಜಡ್ಜ್ ಆದೇಶ ಹೊರಡಿಸಿದ್ದಾರೆ.
ಬಾಲಮಂದಿರದಲ್ಲಿರುವ ಪ್ರಕರಣದ ಓರ್ವ ಬಾಲ ಆರೋಪಿ ಹಾಗೂ ಆರೋಪಿಗಳನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ 7ನೇ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದರು. ತಮಿಳುನಾಡಿನಲ್ಲಿ ಬೀಡುಬಿಟ್ಟಿದ್ದ ಮೈಸೂರು ಪೊಲೀಸರ ತಂಡ ಈ ಮೊದಲು ಬಂಧಿಸಿದ್ದ ಆರೋಪಿಗಳು ಒದಗಿಸಿದ ಮಾಹಿತಿ ಆಧರಿಸಿ 7ನೇ ಆರೋಪಿಯನ್ನು ಸೆರೆಹಿಡಿದಿದೆ.