ಮಂಗಳೂರು ಸೆಪ್ಟೆಂಬರ್ 22: ಕೇಂದ್ರ ಸರಕಾರದ ವಿರುದ್ದ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ನಕಲಿ ರೈತರು ಎಂದು ಅಪಹಾಸ್ಯ ಮಾಡಿರುವ ಯಕ್ಷಗಾನದ ವಿಡಿಯೋ ತುಣಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಕ್ಷಗಾನದ ವೇದಿಕೆಯಲ್ಲಿ ಕಲಾವಿದರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ಉಲ್ಲೇಖಿಸಿ, ‘ಹಲವಾರು ತಿಂಗಳುಗಳಿಂದ ಹಸಿರು ಶಾಲು, ಟೊಪ್ಪಿ ಧರಿಸಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರಲ್ಲ, ನಕಲಿಗಳು. ಅವರು ಆರು ವರ್ಷ ಹೋರಾಟ ನಡೆಸಿದರೂ ಏನೂ ಆಗುವುದಿಲ್ಲ’ ಎಂದು ಹೇಳಿದ್ದಾರೆ. ‘ರೈತರು ರಸ್ತೆಯಲ್ಲಿ ಕುಳಿತಿದ್ದರೆ ನಮಗೆ ಅಕ್ಕಿ ಎಲ್ಲಿಂದ ಸಿಗುತ್ತಿತ್ತು ? ನಿಜವಾದ ರೈತರು ಇನ್ನೂ ಗದ್ದೆಯಲ್ಲೇ ಇದ್ದಾರೆ’ ಎಂದು ಟೀಕಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈತರನ್ನು ಅವಮಾನಿಸುವ, ರಾಜಕೀಯ ಪಕ್ಷಗಳ ಪರವಾಗಿ ಮಾತನಾಡುವ ಮಾತುಗಾರಿಕೆಯು ಯಕ್ಷಗಾನದ ಘನತೆಗೆ ಕುಂದು ತರುವಂತಾಗಿದೆ’ ಎಂದು ರೈತ ಸಂಘದ ಮುಖಂಡರು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯಕ್ಷಗಾನ ಕಲೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವದರ ಬಗ್ಗೆಯೂ ಭಾರೀ ಆಕ್ರೋಶ ವ್ಯಕ್ತವಾಗಿದೆ.