ತುಮಕೂರು: ಇಲ್ಲಿನ ಕ್ಯಾತಸಂದ್ರ ಪೊಲೀಸ್ ಠಾಣೆ ಕೂಗಳತೆ ದೂರದ ನಂದಿ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಮೈಸೂರಿನ ‘ಒಡನಾಡಿ’ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿದೆ. ಲಾಡ್ಜ್ ಸುರಂಗ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದ್ದು, ಪೊಲೀಸ್ ಠಾಣೆಯ ಹತ್ತಿರವೇ ಅಕ್ರಮ ನಡೀತಿದ್ರೂ ಪೊಲೀಸರಿಗೆ ಗೊತ್ತಾಗದಿರುವುದು ಹಲವು ಅನುಮಾನ ಹುಟ್ಟುಹಾಕಿದೆ. ಜೊತೆಗೆ ತುಮಕೂರು ವೇಶ್ಯಾವಾಟಿಕೆ ಹಬ್ ಆಗ್ತಿದ್ಯಾ? ಎಂಬ ಸಂಶಯ ವ್ಯಕ್ತವಾಗಿದೆ.
ಇತ್ತೀಚಿಗೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಶಿರಾಶಿ ಕಾಂಡೋಮ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ದೃಶ್ಯ ಇಡೀ ತುಮಕೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಒಡನಾಡಿ ಸಂಸ್ಥೆಗಳ ಪದಾಧಿಕಾರಿಗಳು ಪೊಲೀಸರ ಸಹಕಾರ ಪಡೆದು ಸೋಮವಾರ ರಾತ್ರಿ ನಂದಿ ಲಾಡ್ಜ್ ಮೇಲೆ ದಾಳಿ ಮಾಡಿದ್ದರು. ಅಲ್ಲಿದ್ದವರೆಲ್ಲ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರು. ಅನುಮಾನಗೊಂಡು ಟೇಬಲ್ ಕೆಳಗಿದ್ದ ಕಿಂಡಿ ತೆಗೆದು ನೋಡಿದ್ರೆ ಸುರಂಗ ಪತ್ತೆಯಾಗಿತ್ತು. ಒಳಹೊಕ್ಕಿ ನೋಡಿದ್ರೆ ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಯುವಕ-ಯುವತಿಯರು ಅವಿತುಕೊಂಡಿದ್ದರು. ಗಂಟೆಗಳ ಲೆಕ್ಕದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಇಂತಿಷ್ಟು ರೇಟ್ ಎಂದು ಫಿಕ್ಸ್ ಮಾಡಿದ್ದ ಚೀಟಿಗಳು ನಂದಿ ಲಾಡ್ಜ್‌ನಲ್ಲಿ ಪತ್ತೆಯಾಗಿವೆ. ಯುವತಿ ಹಾಗೂ ಮಹಿಳೆ ಎಂದು ವಿಂಗಡಸಿ, ಒಬ್ಬರಿಗೂ ಒದೊಂದು ರೇಟು ಫಿಕ್ಸ್ ಮಾಡಿಕೊಂಡಿದ್ದರು. 800 ರೂಪಾಯಿಯಿಂದ 1200 ರೂ.ಗೆ ಡೀಲ್ ಮಾಡಿಕೊಂಡಿದ್ದ ದಾಖಲಾತಿ ಸಿಕ್ಕಿದೆ.
ಪಶ್ಚಿಮ ಬಂಗಾಳ ಮೂಲದ ಯುವತಿಯರೂ ಈ ದಂಧೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪೊಲೀಸರು ಬಂದ್ರೆ ಭಜನೆಯ ಸದ್ದು ಮೊಳಗಿಸುವ ಅಲಾರಂ ಟೆಕ್ನಿಕ್ ಅನ್ನೂ ಕಿಡಿಗೇಡಿಗಳು ಅಳವಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಡ್ರೈನೇಜ್ ಒಳಗೆಯೂ ಗುಹೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ವೇಶ್ಯಾವಾಟಿಕೆ ದಂಧೆಯ ಪರಿ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ ಬಿಚ್ಚಿಟ್ಟಿದ್ದಾರೆ.
ಹೈಟೆಕ್ ವೇಶ್ಯಾವಾಟಿಕೆ ನಗರದೆಲ್ಲೆಡೆ ವ್ಯಾಪಕವಾಗಿದ್ದರೂ ಜಿಲ್ಲಾ ಪೊಲೀಸರು ಜಾಣ ಕುರುಡರಾಗಿದ್ದಾರೆ. ದಂಧೆ ಬಗ್ಗೆ ಖಚಿತ ಮಾಹಿತಿ ಇದ್ದರೂ ಪೊಲೀಸರೇ ಹಣದಾಸೆಯಿಂದ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಕೇಳಿಬಂದಿದೆ. ನಗರದ ಬಹುತೇಕ ಲಾಡ್ಜ್, ಮನೆಗಳಲ್ಲಿ ವೇಶ್ಯಾವಾಟಿಕೆ, ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವ ಶಂಕೆಯಿದ್ದು, ಪೊಲೀಸರ ಸಹಕಾರದಲ್ಲಿಯೇ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ.