ನವದೆಹಲಿ: ಒಲಿಂಪಿಕ್ ನಲ್ಲಿ ಚಿನ್ನದ ಹುಡುಗನಾಗಿ ಮಿಂಚಿದ ಬಳಿಕ ನೀರಜ್ ಗೆ ಭಾರತೀಯರು ಹೇಗೆ ಕ್ರೇಜ್ ಆಗಿದ್ದರು ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದ್ದು ಇವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಭರ್ಜರಿ ವೈರಲ್ ಆಗಿದೆ.
ಈ ಹೊಸ ಜಾಹೀರಾತಿನಲ್ಲಿ ನೀರಜ್ ಅವರ ನಟನಾ ಕೌಶಲ ಸಾಕಷ್ಟು ಗಮನ ಸೆಳೆದಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ವೇದಿಕೆಯಾಗಿರುವ ಬೆಂಗಳೂರು ಮೂಲದ ‘ಕ್ರೆಡ್’ (Cred) ಕಂಪನಿಯ ಹೊಸ ಜಾಹೀರಾತಿನಲ್ಲಿ 23 ವರ್ಷದ ನೀರಜ್ ಕಾಣಿಸಿಕೊಂಡಿದ್ದಾರೆ. ವಿವಿಧ ಅವತಾರಗಳಲ್ಲಿ ಕಂಪನಿ ಸಿಇಒ, ಟಿವಿ ವರದಿಗಾರ, ಬ್ಯಾಂಕ್ ನೌಕರ, ಸಿನಿಮಾ ನಿರ್ದೇಶಕ ಸಹಿತ ಹಲವು ವೇಷಗಳಲ್ಲಿ ನೀರಜ್ ಚೋಪ್ರಾ ಮಿಂಚಿದ್ದು, ನಟನೆಯಲ್ಲೂ ಅವರು ‘ಚಿನ್ನದ ಎಸೆತ’ವನ್ನೇ ಎಸೆದಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ಡ್ರಾವಿಡ್, ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಈ ಮೊದಲು ಇದೇ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಸಾಲಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿಕೊಂಡಿದ್ದಾರೆ.
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ನೀರಜ್ ಚೋಪ್ರಾ ಮನೆಮಾತಾಗಿದ್ದರು. ಇದರ ಜತೆಯಲ್ಲೇ ಅವರ ಬ್ರ್ಯಾಂಡ್ ಮೌಲ್ಯವೂ ಸಾಕಷ್ಟು ಹೆಚ್ಚಾಗಿದೆ. ಹಲವು ಕಾರ್ಪೋರೇಟ್ ಕಂಪನಿಗಳು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲು ಅವರ ಬೆನ್ನುಬಿದ್ದಿವೆ. ಇದರ ಜೊತೆಗೆ ಒಲಿಂಪಿಕ್ಸ್ ಚಿನ್ನದ ಸಾಧನೆಯ ಬಳಿಕ ಅವರ ಮೊದಲ ಜಾಹೀರಾತು ಬಿಡುಗಡೆಯಾಗಿದೆ.
ನೀರಜ್ ಚೋಪ್ರಾ ಚಿನ್ನದ ಹುಡುಗನಾಗಿ ಮಿಂಚಿದ ಬಳಿಕ ಭಾರತೀಯರು ಹೇಗೆ ಅವರ ಬಗೆಗೆ ಕ್ರೇಜ್ ಆಗಿದ್ದರು ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದ್ದು, ನೀರಜ್ ಮೇಲೆ ಫಿದಾ ಆಗಿರುವ ಭಾರತದ ವಿವಿಧ ಕ್ಷೇತ್ರಗಳ ಜನರ ಪಾತ್ರಗಳಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಜಾವೆಲಿನ್ ಹಿಡಿದುಕೊಂಡು ಅವರು ಕ್ರಿಕೆಟ್ ಬ್ಯಾಟ್ ಹಿಡಿದಂತೆ ಬ್ಯಾಟಿಂಗ್ ಮಾಡಿರುವುದು ಕೂಡ ಜಾಹೀರಾತಿನಲ್ಲಿ ಗಮನಸೆಳೆದಿದೆ.