ಮಂಗಳೂರು: ಕರಾವಳಿಗೆ ಹೋಗಿ ಸಖತ್ತಾಗಿ ಮೀನೂಟ ಮಾಡಬೇಕು ಅಂತಾ ನೀವೇನಾದರೂ ಪ್ಲ್ಯಾನ್ ಮಾಡಿದ್ರೆ ಇದುವೇ ರೈಟ್ ಟೈಮ್. ಮೀನೂಟ ಪ್ರಿಯರಿಗೆ ಸಂತಸದ ಸುದ್ದಿ ಮಂಗಳೂರಿನಲ್ಲಿ ಕಾಯುತ್ತಿದೆ.
ಇಷ್ಟು ದಿನ ಗಗನೆಕ್ಕೆರಿದ ತಾಜಾ ಮೀನಿನ ದರದಲ್ಲಿ ಸದ್ಯ ಭಾರೀ ಇಳಿಕೆಯಾಗಿದೆ.
ತಾಜಾ ಮೀನುಗಳು ಅಗ್ಗದ ದರದಲ್ಲಿ ಮಂಗಳೂರಿನಲ್ಲಿ ದೊರಕುತ್ತಿದೆ. ಮೀನು ಪ್ರಿಯರ ಜೊತೆಗೆ, ಮೀನು ಮಾರಾಟಗಾರರು, ಮೀನು ಖರೀದಿದಾರರು ಫುಲ್ ಖುಷ್ ಆಗಿದ್ದಾರೆ. ಮೀನು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣವಿದೆ.
‘ಅಂಜಲ್, ಮಾಂಜಿ, ಮದಿಮಾಲ್, ಡಿಸ್ಕೋ, ಬಂಗುಡೆ. ಭಲೇ ಅಣ್ಣ, ಭಲೇ ಅಕ್ಕ. ಮೀನ್‌ಗ್ ರೇಟ್ ಭಾರೀ ಅಗ್ಗ ಉಂಡು..’ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಒಂದು ಸುತ್ತು ಬಂದರೆ ಈ ಮಾತು ಕೇಳುತ್ತಿರುತ್ತದೆ. ಕಡಲಿನಿಂದ ಬೋಟ್‌ಗಳು ಹೇರಿ ಬಂದ ರಾಶಿ ರಾಶಿ ತಾಜಾ ಮೀನುಗಳು, ಮಂಗಳೂರು ಕಡಲತಡಿಯಲ್ಲಿ ಮೀನುಗಳ ಸುಗ್ಗಿಯ ಕಾಲ ತಂದಿದೆ.
ಸದ್ಯ ಕರಾವಳಿಯಲ್ಲಿ ಮತ್ಸ್ಯ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಫಿಶಿಂಗ್ ಚೆನ್ನಾಗಿ ನಡೆದು ಕಡಲ ಕುವರರು ಸಂತಸಗೊಂಡಿದ್ದಾರೆ. ರಾಶಿ ರಾಶಿ ಮೀನು ಹೆಚ್ಚಾಗಿ ಸಿಗುವ ಕಾರಣ, ಪೂರೈಕೆ ಹೆಚ್ಚಾಗಿ ದರದಲ್ಲಿ ಇಳಿಮುಖವಾಗಿದೆ. ಕೇರಳಕ್ಕೆ ಸದ್ಯ ಮೀನು ಸಾಗಾಟ ಆಗ್ತಾ ಇಲ್ಲ. ಹೀಗಾಗಿ ಸಹಜವಾಗಿಯೇ ಮೀನಿನ ದರದಲ್ಲಿ ಇಳಿಕೆಯಾಗಿದೆ. ಮೀನುಗಾರಿಕಾ ಋತು ಆರಂಭದಿಂದಲೇ ಕಡಲಿನಲ್ಲಿ ಮೀನಿನ ಬೇಟೆ ಭರ್ಜರಿಯಾಗಿಯೇ ಆಗುತ್ತಿದೆ. ಇದರಿಂದ ರಾಶಿ ರಾಶಿ ಮೀನುಗಳು ಮೀನುಗಾರಿಕಾ ಬಂದರನ್ನು ಸೇರುತ್ತಿದೆ.
ಕೋಳಿ, ಕುರಿಗಿಂತ ತಾಜಾ, ಯಾವುದೇ ಕಲಬೆರಕೆಯಿಲ್ಲ. ಮೀನು ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಅಭಿಪ್ರಾಯ ಗ್ರಾಹಕರದ್ದು. ಹೀಗಾಗಿ ಬೆಳಗ್ಗೆ ಬೇಗನೇ ಮೀನುಗಾರಿಕಾ ಬಂದರಿಗೆ ಬಂದು ತಮಗಿಷ್ಟವಾದ ಮೀನನ್ನು ಖರೀದಿಸುತ್ತಿದ್ದಾರೆ.