ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಆಡಳಿತ ಮುಂದಾಗಿದ್ದು, ಪ್ರತೀ ಜಿಲ್ಲೆಗಳಲ್ಲೂ ಜಿಲ್ಲಾಡಳಿತಗಳು ಪಟ್ಟಿ ರೆಡಿಮಾಡಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿ ತಯಾರಿಸಿದ್ದು ಪಟ್ಟಿಯಲ್ಲಿ 902 ಶ್ರದ್ಧಾ ಕೇಂದ್ರಗಳಿವೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ ಒಟ್ಟು 902 ಅನಧಿಕೃತ ಕಟ್ಟಡಗಳಿದ್ದು, ಇದರಲ್ಲಿ ದೇವಸ್ಥಾನಗಳದ್ದೇ ಅಗ್ರಪಾಲಾಗಿದೆ. ಈ ಪಟ್ಟಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ನಗರದ ಶಕ್ತಿನಗರದ ಶ್ರೀವೈದ್ಯನಾಥ ದೇವಸ್ಥಾನವೂ ಹೊಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.
2009ರ ಹಿಂದಿನವರೆಗಿನ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದೆ. ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳೆಂದು ಗುರುತು ಮಾಡಲಾಗಿದ್ದು, ಇದರಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚರ್ಚ್ ಮತ್ತು 11 ಧಾರ್ಮಿಕ ಕಟ್ಟಡಗಳನ್ನು ಒಳಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ., ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇವಲ ಅನಧಿಕೃತ ಕಟ್ಟಡಗಳ ಪಟ್ಟಿ ಮಾಡಿದ್ದೇವೆ. ಈಗ ಕಟ್ಟಡ ತೆರವಿಗೆ ಸೂಚನೆ ನೀಡಿಲ್ಲ. ರಾಜ್ಯ ಸರ್ಕಾರ ಮುಂದಿನ ಆದೇಶದ ಬಳಿಕ ಮುಂದುವರಿಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ 400 ಧಾರ್ಮಿಕ ಕಟ್ಟಡಗಳಿಗೆ ರಿಯಾಯತಿ ನೀಡುವ ಸಾಧ್ಯತೆಗಳು ಇದೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಹೆದ್ದಾರಿಯ ಬದಿಗಳಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಸರ್ಕಾರ ಸೂಚಿಸಿತ್ತು. ಕೆಲವು ದೇವಸ್ಥಾನಗಳ ಆಡಳಿತ ಮಂಡಳಿ ಸ್ವಪ್ರೇರಿತವಾಗಿ ದೇವಸ್ಥಾನದ ದೇವರನ್ನು ಬೇರೆ ಕಡೆ ಪ್ರತಿಷ್ಠೆ ಮಾಡಿದ್ದವು. ಆದರೆ ಈವರೆಗೂ ಆ ದೇವಸ್ಥಾನಗಳ ತೆರವು ಆಗಿಲ್ಲ. ಇನ್ನು ಕೆಲ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಗಳನ್ನು ತೆರವುಗೊಳಿಸದೇ ಸಡ್ಡು ಹೊಡೆದಿದ್ದವು.
ಇದೀಗ ದೇವಸ್ಥಾನಗಳ ತೆರವು ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ದೇವಸ್ಥಾನಗಳ ಆಡಳಿತ ಮಂಡಳಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.