ವಾಷಿಂಗ್ಟನ್(ಸೆ.12): ಅಮೆರಿಕದ ಪಾಲಿಗೆ ಗುಣವಾಗದ ಗಾಯದಂತಿರುವ 2001 ಸೆಪ್ಟೆಂಬರ್ 09ರ, ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದ ಮೇಲೆ ಅಲ್‌ಖೈದಾ ಉಗ್ರರು ನಡೆಸಿರೋ ದಾಳಿಗೆ 20 ವರ್ಷಗಳು ಸಂದಿವೆ. ಅಂದಿನ ಭಯಾನಕ, ಭಿಭತ್ಸ ಭಯೋತ್ಪಾದಕ ಘಟನೆಯನ್ನು ಅಮೆರಿಕ ಏನೂ ಇಡೀ ಜಗತ್ತೇ ಇಂದಿಗೂ ಮರೆತಿಲ್ಲ.
ಸೆಪ್ಟೆಂಬರ್ 11, 2001, ಜಾಗತಿಕ ಇತಿಹಾಸದಲ್ಲಿ ಉಗ್ರ ಅಟ್ಟಹಾಸದ ವಿಶ್ವರೂಪ ಪ್ರದರ್ಶನವಾದ ದಿನ..! ವಿಶ್ವದ ದೊಡ್ಡಣ್ಣ ಎಂದೇ ಬೀಗುತ್ತಿದ್ದ ಅಮೆರಿಕ ದೇಶಕ್ಕೆ ಉಗ್ರರು ಮರ್ಮಾಘಾತ ನೀಡಿದ ದಿನ..! ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್, ದೊಡ್ಡಣ್ಣನ ವಿರುದ್ಧ ಮೀಸೆ ತಿರುವಿದ ದಿನವಿದು..!
ಅಂದು ಸೆ.11:
ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳನ್ನು ಒಸಾಮ ಬಿನ್ ಲಾಡೆನ್ ನೇತೃತ್ವದ ಆಲ್ಖೈದಾ ಉಗ್ರರು ವೈಮಾನಿಕ ದಾಳಿ ಮೂಲಕ ಹೊಡೆದುರುಳಿಸಿದ್ದರು. ಏಕಾಏಕಿ ವಾಣಿಜ್ಯ ಕಟ್ಟಡಗಳತ್ತ ಹಾರಿ ಬಂದ ಮೂರು ಪ್ರಯಾಣಿಕ ವಿಮಾನಗಳು ನೋಡ ನೋಡುತ್ತಿದ್ದಂತೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದವು.
ಪರಿಣಾಮ ಸಾವಿರಾರು ಅಮಾಯಕರು ಈ ದಾಳಿಯಲ್ಲಿ ಬಲಿಯಾದರೆ, ಹಲವಾರು ಮಂದಿ ಗಾಯಗೊಂಡರು. ಈ ದಾಳಿಯಿಂದ ಗಾಯಗೊಂಡ ಹಲವು ಕುಟುಂಬಗಳು ಈಗಲೂ ಹಲವಾರು ದೈಹಿಕ ಖಾಯಿಲೆಗಳಿಂದ ಬಳಲುತ್ತಿವೆ.
ಉಗ್ರ ದಾಳಿಯಿಂದ ಕೆಲ ನಿಮಿಷಗಳಲ್ಲೇ ನೆಲಸಮಗೊಂಡ ವಾಣಿಜ್ಯ ಕೇಂದ್ರದ ಎರಡು ಕಟ್ಟಡಗಳ ಸುಮಾರು 750 ಮಿಲಿಯನ್ ಡಾಲರ್ ವೆಚ್ಚದ, 1.8 ಮಿಲಿಯನ್ ಟನ್ನಷ್ಟು ಅವಶೇಷಗಳನ್ನು ಸ್ವಚ್ಛಗೊಳಿಸಲು ರಕ್ಷಣಾ ಸಿಬ್ಬಂದಿಗಳಿಗೆ ಸುಮಾರು 3.1 ಮಿಲಿಯನ್ ಗಂಟೆಗಳು ಬೇಕಾದವು.
ಒಸಾಮ ಬಿನ್ ಲ್ಯಾಡ್ನ್ನ ಉಗ್ರ ಗ್ಯಾಂಗ್ ಈ ಭಯೋತ್ಪಾದನಾ ದಾಳಿ ನಡೆಸಲು ಸುಮಾರು 5,00,000 ಡಾಲರ್ ವ್ಯಯಿಸಿದರೆ, ದಾಳಿ ನಡೆದ ಬಳಿಕ ತಿಂಗಳೊಳಗೆ ಅಮೆರಿಕ ವ್ಯಯಿಸಿದ ಹಣ ಬರೋಬ್ಬರಿ 123 ಬಿಲಿಯನ್ ಡಾಲರ್.
ಇನ್ನು ಕಟ್ಟಡಗಳು ನೆಲಸಮಗೊಂಡ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಯುಎಸ್ಎಗೆ ಸುಮಾರು ಒಂದೂವರೆ ವರ್ಷಗಳೇ ಬೇಕಾದವು. ಇನ್ನು ವೈಮಾನಿಕ ದಾಳಿಯಿಂದ ಕಟ್ಟಡದಲ್ಲಿ ಆವರಿಸಿದ ಬೆಂಕಿ ಹಾಗೂ ಹೊಗೆ ಹೋಗಲಾಡಿಸಲು ಅಗ್ನಿಶಾಮಕ ಅಧಿಕಾರಿಗಳು ಸುಮಾರು 99 ದಿನಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಜಗತ್ತಿನ ದೊಡ್ಡ ಡೆಡ್ಲಿ ಅಟ್ಯಾಕ್:
ಈ ಭಯೋತ್ಪಾದನಾ ದಾಳಿಯನ್ನು ಜಗತ್ತಿನ ಡೆಡ್ಲಿಯೆಸ್ಟ್ ಅಟ್ಯಾಕ್ ಎಂದೇ ಕರೆಯಲಾಗಿದೆ. ಸುಮಾರು 3000ಕ್ಕೂ ಅಧಿಕ ಜನರು ಈ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಸುಮಾರು 10000ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡರು. 11 ಗರ್ಭಿಣಿಯರು ಆಗಿನ್ನೂ ಜಗತ್ತನ್ನೇ ನೋಡದ ಮಕ್ಕಳೊಂದಿಗೆ ಬಲಿಯಾಗಿದ್ದರು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ದಾಳಿ ನಡೆದ ದಿನದಂದು ಸಾವನ್ನಪ್ಪಿದವರ ಸಂಖ್ಯೆಗಿಂತ, ದಾಳಿ ನಡೆದ ನಂತರದ ರಕ್ಷಣಾ ಕಾರ್ಯಾಚರಣೆಯ ವೇಳೆ ಸತ್ತವರ ಸಂಖ್ಯೆಯೇ ಹೆಚ್ಚು. ಸಾವಿರಾರು ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ರಕ್ಷಣಾ ತಂಡದವರು ಉಸಿರಾಟದ ಸಮಸ್ಯೆ, ಕ್ಯಾನ್ಸರ್, ಮಾನಸಿಕ ಆರೋಗ್ಯ ಮತ್ತು ಜಠರದ ತೊಂದರೆಯಿಂದ ಸತ್ತಿದ್ದಾರೆ.
ಇನ್ನು ಕೆಲ ವರದಿಗಳ ಪ್ರಕಾರ ಸಾವನ್ನಪ್ಪಿದವರಲ್ಲಿ 1113 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನೊಂದು ಆಘಾತಕಾರಿ ವಿಷಯವೇನೆಂದರೆ 3050ಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ -ತಾಯಿಯರನ್ನು ಕಳೆದುಕೊಂಡು ಅನಾಥರಾದರು.
ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಆದೇಶದಂತೆ ಅಫ್ಘಾನಿಸ್ತಾನಲ್ಲಿ ತಾಲಿಬಾನ್ ಹಾಗೂ ಅಲ್‌ಖೈದಾ ವಿರುದ್ಧ ಭಾರೀ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಅಮೆರಿಕ ಸೇನೆ, ತಾಲಿಬಾನ್ ಹಾಗೂ ಅಲ್‌ಖೈದಾ ಸಂಘಟನೆಯನ್ನು ಇನ್ನಿಲ್ಲದಂತೆ ನಿರ್ನಾಮ ಮಾಡಿತು. ಆದ್ರೆ, ಅಲ್‌ಖೈದಾ ಅಧಿನಾಯಕ ಒಸಾಮಾ ಬಿನ್ ಲಾಡೆನ್ ಬಹುಕಾಲದವರೆಗೆ ಅಮೆರಿಕಾಗೆ ಸಿಗಲೇ ಇಲ್ಲ.
ಅಮೆರಿಕದ ನಿರಂತರ ಶೋಧ ಹಾಗೂ ಕಣ್ಗಾವಲು ಕೈಗೂಡಿದ್ದು, 2011ರಲ್ಲಿ. ಅಮೆರಿಕ ಮೇಲೆ ದಾಳಿ ನಡೆದ 10 ವರ್ಷಗಳ ಬಳಿಕ, ಒಸಾಮಾ ಬಿನ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನ ಕಟ್ಟಡವೊಂದರಲ್ಲಿ ಪತ್ತೆಯಾದ. ಆತನನ್ನು ಹುಡುಕಿದ ಅಮೆರಿಕದ ಬೇಹುಗಾರಿಕಾ ಪಡೆಗಳು, ಸೇನೆಯ ಸೀಲ್ ವಿಶೇಷ ಪಡೆಯ ನೆರವಿನೊಂದಿಗೆ ಹತ್ಯೆಗೈಯ್ಯಲಾಯಿತು.
ಸೆಪ್ಟೆಂಬರ್ 11, 2001ರಲ್ಲಿ ನಡೆದ ಹತ್ಯಾಕಾಂಡಕ್ಕೆ ಮೇ 1, 2011ರಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಯ್ತು. ಇದಕ್ಕೂ ಮುನ್ನ, ಇರಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಅಮೆರಿಕ ದೊಡ್ಡ ಪ್ರಮಾಣದ ಸಮರವನ್ನೇ ನಡೆಸಿತ್ತು. ಈ ಸಮರದ ಪರಿಣಾಮವಾಗಿ ಜಾಗತಿಕ ಭಯೋತ್ಪಾದನಾ ಸ್ವರೂಪವೇ ಬದಲಾಗಿದ್ದು, ಈಗ ಇತಿಹಾಸ..