ಶಿವಮೊಗ್ಗ: 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸುವ ಕುರಿತು ಶೀಘ್ರವೇ ತಾಂತ್ರಿಕ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 6 ರಿಂದ 8ನೇ ತರಗತಿಗಳನ್ನು ನಮ್ಮ ಶಿಕ್ಷಕರು ಚೆನ್ನಾಗಿ ನಡೆಸಿದ್ದಾರೆ. ಶಿಕ್ಷಕರ ಕಾರ್ಯವೈಖರಿ ನೋಡಿ ತುಂಬ ಸಂತೋಷವಾಗಿದೆ. ಸದ್ಯದಲ್ಲೇ 1ರಿಂದ 5 ರವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ ಬಳಿಕ ಆರಂಭಿಸುತ್ತೇವೆ ಎಂದರು.
ಪಠ್ಯ ಕಡಿತಗೊಳಿಸುವ ಕುರಿತು ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ತಿ ಮಾಡಿದರೆ ಮಕ್ಕಳಿಗೆ ಲಾಭ. ಮಕ್ಕಳು ಒಂದೂವರೆ ವರ್ಷ ಶಾಲೆಯಿಂದ ದೂರ ಉಳಿದಿದ್ದಾರೆ. ಅದನ್ನು ಬ್ರಿಡ್ಜ್ ಕೋರ್ಸ್ನಲ್ಲಿ ಪೂರ್ಣಗೊಳಿಸಬೇಕಿದೆ.ಈ ವರ್ಷವೂ ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಆ ಬಗ್ಗೆ ಇನ್ನು ಯಾವ ನಿರ್ಣಯ ಕೈಗೊಂಡಿಲ್ಲ ಎಂದು ಹೇಳಿದರು.
ಶಿಕ್ಷಕರ ರಜೆ ಕಡಿಮೆ ಮಾಡಿ ಪಠ್ಯ ಪೂರ್ಣಗೊಳಿಸಬಹುದಾ? ಎಂಬ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.
ಒಂದು ವೇಳೆ ಕರೋನ ಮತ್ತೆ ಹೆಚ್ಚಳವಾದರೆ ಶಾಲೆಗಳನ್ನು ಮುಚ್ಚಲು ಅವಕಾಶ ಇದ್ದು ಅಲ್ಲಿವರೆಗೆ ಶಾಲೆ ತೆರೆಯುವ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.