ಬೆಂಗಳೂರು : ಕೊರೊನಾ 3ನೇ ಅಲೆ ಭೀತಿ ಬೆನ್ನಲ್ಲೇ ಜನರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಕೊರೊನಾದ ಡೆಲ್ಟಾ ಉಪ ರೂಪಾಂತರಿ ಎವೈ3, ಎವೈ4, ಎವೈ6 (AY3, AY4, AY6) ಪತ್ತೆಯಾಗಿವೆ.
ರಾಜ್ಯದಲ್ಲಿ ಈವರೆಗೆ ಹೊಸ ರೂಪಾಂತರಿಯ 400 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ ಒಂದಿಷ್ಟು ಜನರಿಗೆ ರೂಪಾಂತರಿ ಕಂಡು ಬಂದಿದೆ.
ಎವೈ3, ಎವೈ4, ಎವೈ6 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಕೆಲವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಈವರೆಗೂ ಡೆಲ್ಟಾ ಉಪ ರೂಪಾಂತರಿಯಿಂದ ಯಾರೊಬ್ಬರೂ ಮೃತ ಪಟ್ಟಿಲ್ಲ. ರೂಪಾಂತರಗೊಂಡ ವೈರಸ್ ಯಾವ ಮಟ್ಟದಲ್ಲಿ ಹರಡುತ್ತಿದೆ ಎಂಬ ಬಗ್ಗೆ ತಪಾಸಣೆ ನಡೆಯುತ್ತಿದೆ. ಇದರ ಬಿ.1.617.1 ಕಪ್ಪಾ ಪ್ರಭೇದ ಇಬ್ಬರಲ್ಲಿ ಪತ್ತೆಯಾಗಿದ್ದರೆ, ಮೂವರಲ್ಲಿ ಡೆಲ್ಟಾ ಉಪ ರೂಪಾಂತರಿ ಎವೈ3 ಪತ್ತೆಯಾಗಿದೆ. ಇನ್ನು ನಾಲ್ವರಲ್ಲಿ ಡೆಲ್ಟಾ ಉಪ ರೂಪಾಂತರಿ ಎವೈ4 ಪತ್ತೆಯಾಗಿದ್ದು, 38 ಜನರಲ್ಲಿ ಡೆಲ್ಟಾ ಉಪ ರೂಪಾಂತರ ಎವೈ6 ಪತ್ತೆಯಾಗಿದೆ. ಇನ್ನೂ16 ಜನರಲ್ಲಿ ಕೊರೊನಾದ ಇತರ ತಳಿಗಳು ಪತ್ತೆಯಾಗಿವೆ’ ಎಂದರು. ಒಟ್ಟಾರೆ ಈ ರೂಪಾಂತರಿ ವೈರಸ್ ಗಳಿಂದ ಜನರ ನೆಮ್ಮದಿ ಹಾಳಾಗಿರುವುದಂತೂ ಸತ್ಯ.