ಚಾಮರಾಜನಗರ: ಜಿಲ್ಲೆಯ ಗಡಿ ಭಾಗ, ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಯಾನೆ ಸೇರಿದಂತೆ ಮೂರು ಆನೆಗಳು ಕಬ್ಬಿನ ಲಾರಿಯೊಂದನ್ನು ತಡೆದು ಅದರಲ್ಲಿರುವ ಕಬ್ಬನ್ನು ತಿನ್ನುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೆಪಾಲಂ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹೆದ್ದಾರಿಯಲ್ಲಿ ಲಾರಿಗಳು ತಮಿಳನಾಡಿಗೆ ಕಬ್ಬು ತೆಗೆದುಕೊಂಡು ಹೋಗುತ್ತವೆ. ರಸ್ತೆ ಬದಿಯಲ್ಲಿ ನಿಂತಿರುವ ಆನೆಗಳು ಕಬ್ಬಿನ ಲಾರಿ ಸಾಗುವಾಗ ಸೊಂಡಿಲು ಹಾಕಿ ಕಬ್ಬಿನ ಜಲ್ಲೆಗಳನ್ನು ಎಳೆಯುವುದು ಸಾಮಾನ್ಯ ಸಂಗತಿ. ಆದರೆ, ಎರಡಕ್ಕಿಂತ ಹೆಚ್ಚು ಆನೆಗಳು ಒಟ್ಟಾಗಿ ಕಬ್ಬಿನ ಲಾರಿಗಳನ್ನು ಅಡ್ಡ ಹಾಕುವುದು ಅಪರೂಪ.
ಆದರೆ, ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಮರಿಯೊಂದಿಗಿರುವ ಒಂದು ಆನೆಯ ಲಾರಿಯ ಬಲ ಭಾಗದಿಂದ ನಿಂತು ಕಬ್ಬಿನ ಜಲ್ಲೆಗಳನ್ನು ಎಳೆದು ತಿನ್ನುತ್ತಿದ್ದರೆ, ಇನ್ನೊಂದು ಆನೆ ಮತ್ತೊಂದು ಬದಿಯಿಂದ ಕಬ್ಬು ಎಳೆದು ತಿನ್ನುತ್ತಿದೆ.
ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದವರು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.