ಮಂಗಳೂರು, ಸೆ.5 : ಪಾಯಸ ಆಗೋವರೆಗೆ ಇದ್ದವರು ಆರೋ ತನಕ ಇರಬಾರದೇ ? ಪಾಯಸ ಆಗಿದೆ, ಅದನ್ನು ಬಿಸಿ ಬಿಸಿ ಇರುವಾಗಲೇ ತಿಂದ್ಬಿಟ್ಟು ಬಾಯಿ ಸುಟ್ಟುಕೊಳ್ಳೋದು ಯಾಕೆ ? ಹೀಗೆಂದು ಗಾದೆ ಮಾತಿನ ಮೂಲಕ ದಕ್ಷಿಣ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ವೀಕೆಂಡ್ ಕರ್ಫ್ಯೂ ಬಗ್ಗೆ ಪ್ರಶ್ನಿಸಿ ಕರೆ ಮಾಡಿದ ವ್ಯಕ್ತಿಗೆ ಸಮಾಧಾನ ಚಿತ್ತದಿಂದ ಉತ್ತರಿಸಿದ ಆಡಿಯೋ ಈಗ ವೈರಲ್ ಆಗಿದೆ.
ರೆಡಿಮೇಡ್ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಮಾರಾಟದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಅನ್ನುವವರು ವೀಕೆಂಡ್ ಕರ್ಫ್ಯೂ ಬಗ್ಗೆ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದು, ನಮ್ಮ ವ್ಯಾಪಾರಸ್ಥರು ಅಂಗಡಿ ತೆರೆದಿಡಲು ನೀವು ಅವಕಾಶ ಕೊಡಬೇಕು. ಯಾವುದೇ ರೀತಿಯಲ್ಲಿ ಜನ ಸೇರದಂತೆ ನಾವು ನೋಡಿಕೊಳ್ಳುತ್ತೇವೆ. ಜನ ಸೇರಿದರೆ ಕ್ರಮ ತಗೊಳ್ಳಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿದ್ದಾರೆ.
ಈ ಕೊರೊನಾ ನಿರ್ವಹಣೆಯಿಂದ ನಮಗೂ ಸಾಕಾಗಿ ಹೋಗಿದೆ. ನಮಗೂ ವೀಕೆಂಡ್ ಲಾಕ್ ಡೌನ್ ಮಾಡಬೇಕು, ನಿಮಗೆ ಕಷ್ಟ ಕೊಡಬೇಕು ಅಂತೇನಿಲ್ಲ. ಆದರೆ, ಈ ವಾರ ಕೊರೊನಾ ಪಾಸಿಟಿವ್ ರೇಟ್ 2.04 ಇದೆ. ಮುಂದಿನ ವಾರಕ್ಕೆ ಖಂಡಿತವಾಗ್ಯೂ ಈ ದರ 2.0 ಒಳಗೆ ಬರುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ವೀಕೆಂಡ್ ಕರ್ಫ್ಯೂ ತೆಗೆಯಬೇಕೆಂದು ಹೇಳುತ್ತಿದ್ದಾರೆ. ಆದರೆ, ನಾವು ರಾಜ್ಯ ಸರಕಾರದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ.
ನೀವು ಅಂಗಡಿ ತೆರೆದಲ್ಲಿ ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಟ್ರೇಡ್ ಲೈಸನ್ಸ್ ರದ್ದು ಮಾಡುವುದು, ಕೇಸ್ ಮಾಡುವುದು, ಆಮೇಲೆ ಕೋರ್ಟ್ ಅಲೆದಾಡುವುದು ಎಲ್ಲ ನಿಮಗೆ ಬಿಟ್ಟಿದ್ದು. ಇಷ್ಟು ದಿನದ ವರೆಗೂ ಕಾದಿರಿ. ಈ ಬಾರಿ ಒಂದು ದಿನಕ್ಕೆ ಕಾದುಬಿಡಿ. ಡೆಫಿನಿಟ್ ಆಗಿ ಹೇಳ್ತೀನಿ. ಮುಂದಿನ ವಾರಕ್ಕೆ ವೀಕೆಂಡ್ ಲಾಕ್ಡೌನ್ ತೆರವಾಗುವ ವಿಶ್ವಾಸ ಇದೆ. ಪಾಸಿಟಿವ್ ರೇಟ್ 2ರ ಒಳಗೆ ಬಂದಲ್ಲಿ ವೀಕೆಂಡ್ ತೆರವಾಗಲಿದೆ ಎಂದು ಜಿಲ್ಲಾಧಿಕಾರಿ ಮನವರಿಕೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಜೊತೆಗಿನ ಸಂಭಾಷಣೆಯ ಆಡಿಯೋವನ್ನು ಸಂತೋಷ್ ಕಾಮತ್ ತಮ್ಮ ಗ್ರೂಪಿನಲ್ಲಿ ಹಾಕಿದ್ದು, ಪಾಯಸದ ಉದಾಹರಣೆ ಕೊಟ್ಟಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.