ನವದೆಹಲಿ, ಸೆ.5 : ರಾಜಧಾನಿ ದೆಹಲಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಬಿಯಾ ಸೈಫಿ ಎನ್ನುವ 22 ವರ್ಷದ ಯುವತಿ ಈ ರೀತಿ ಬರ್ಬರ ಹತ್ಯೆಗೀಡಾಗಿದ್ದು, ಘಟನೆಯನ್ನು ಖಂಡಿಸಿ ಸಬಿಯಾ ಸೈಫಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೃಷ್ಟಿಯಾಗಿದೆ.
ಲಜಪತ್ ನಗರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬಿಯಾ ಸೈಫಿ ವಾರದ ಹಿಂದೆ ನಾಪತ್ತೆಯಾಗಿದ್ದಳು. ಆಕೆಯನ್ನು ಆಗಸ್ಟ್ 26ರಂದು ತಂಡವೊಂದು ಅಪಹರಿಸಿ, ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದೆ ಎನ್ನಲಾಗುತ್ತಿದೆ. ಆಕೆಯ ಶವ ಸೂರಜ್ ಕುಂದ್ ಎಂಬಲ್ಲಿ ರಸ್ತೆ ಬದಿಯ ಹೊಂಡದಲ್ಲಿ ಪತ್ತೆಯಾಗಿದ್ದು, ಎದೆಯ ಭಾಗವನ್ನು ಕೊಯ್ಯಲಾಗಿತ್ತು. ಕುತ್ತಿಗೆಯನ್ನು ಹರಿತ ಕತ್ತಿಯಿಂದ ಸೀಳಲಾಗಿತ್ತು. ಮರ್ಮಾಂಗಕ್ಕೆ ಸಿಗಿದು ಹಾನಿ ಮಾಡಲಾಗಿತ್ತು. ಇದಲ್ಲದೆ, ದೇಹದ ಹಲವೆಡೆ ಕತ್ತಿಯಿಂದ ಇರಿದಿರುವ ಗಾಯಗಳಿದ್ದವು.
ಹರ್ಯಾಣದ ಫರೀದಾಬಾದ್ ಎಂಬಲ್ಲಿನ ಸೂರಜ್ ಕುಂದ್ ಪಾಲಿ ರಸ್ತೆಯಲ್ಲಿ ಶವ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿ ಆಕೆಯ ಪತಿ ಎನ್ನಲಾಗಿರುವ ನಿಜಾಮುದ್ದೀನ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ತಾನೇ ಈ ಕೃತ್ಯವನ್ನು ಎಸಗಿದ್ದಾಗಿ ಹೇಳಿದ್ದಾನೆ ಎನ್ನಲಾಗುತ್ತಿದ್ದು, ಘಟನೆಯ ಬಗ್ಗೆ ಭಾರೀ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಸೂರಜ್ ಕುಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆದರೆ, ಪೊಲೀಸರು ನೀಡಿರುವ ಈ ಮಾಹಿತಿಯನ್ನು ಯುವತಿ ಕುಟುಂಬಸ್ಥರು ನಿರಾಕರಿಸಿದ್ದಾರೆ. ಆಕೆಗೆ ಮದುವೆಯಾಗಿರುವುದೇ ಗೊತ್ತಿಲ್ಲ. ಮದುವೆಯಾಗಿರುವ ಬಗ್ಗೆ ಯಾವುದೇ ದಾಖಲೆಯೂ ಇಲ್ಲ. ನಿಜಾಮುದ್ದೀನ್ ಯಾರೆನ್ನುವುದೂ ತಿಳಿದಿಲ್ಲ ಎಂದು ಯುವತಿಯ ತಂದೆ ಸಮೀದ್ ಅಹ್ಮದ್ ಹೇಳಿದ್ದಾರೆ. ಅಲ್ಲದೆ, ಆಕೆ ಕರ್ತವ್ಯದಲ್ಲಿದ್ದ ಲಜಪತ್ ನಗರ್ ಡಿಎಂ ಕಚೇರಿಯ ಸಿಬಂದಿ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಅವ್ಯವಹಾರದ ಬಗ್ಗೆ ಸಬಿಯಾ ತಿಳಿದುಕೊಂಡಿದ್ದಳು. ಅದೇ ದ್ವೇಷದಲ್ಲಿ ಸಿಬಂದಿಯೇ ಈ ಕೃತ್ಯ ಎಸಗಿದ್ದಾಗಿ ಆರೋಪಿಸಿದ್ದಾರೆಂದು ಕೆಲವು ವೆಬ್ ಮಾಧ್ಯಮಗಳು ವರದಿ ಮಾಡಿವೆ.
ಸೋಶಿಯಲ್ ಮೀಡಿಯಾದಲ್ಲಿ ಜಸ್ಟಿಸ್ ಫಾರ್ ಸಬಿಯಾ ಸೈಫಿ ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ದೇಶಾದ್ಯಂತ ಹಲವಾರು ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಅಲ್ಲದೆ, ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದ ಯುವತಿಯನ್ನೇ ರಾಜಧಾನಿ ದೆಹಲಿಯಲ್ಲಿ ಈ ರೀತಿ ಬರ್ಬರ ಹತ್ಯೆ ಮಾಡಿದ್ದರ ಬಗ್ಗೆ ದೆಹಲಿ ಪೊಲೀಸರು ಮತ್ತು ಸರಕಾರ ಮೌನ ವಹಿಸಿರುವ ಬಗ್ಗೆ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ.