ಪುತ್ತೂರು, ಸೆ.5 : ರೈಲ್ವೇ ಹಳಿಗೆ ಅಳವಡಿಸಿರುವ ಜಾಯಿಂಟ್ ಕ್ಲಿಪ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ರೈಲು ಹಳಿಯಿಂದ ಕಬ್ಬಿಣದ ಕ್ಲಿಪ್ಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಫ್ತಿಯಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.
ಶನಿವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಮಫ್ತಿಯಲ್ಲಿದ್ದ ರೈಲ್ವೇ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಒಂದು ಟಾಟಾ ಏಸ್ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆರೋಪಿಗಳನ್ನು ಸಕಲೇಶಪುರ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. ರೈಲು ಹಳಿಗೆ ಅಳವಡಿಸುವ ಎಂಟು ಆಕಾರದ ಜಾಯಿಂಟ್ ಕ್ಲಿಪ್ ಗಳನ್ನು ಕೆಲವರು ಸೇರಿಕೊಂಡು ವ್ಯವಸ್ಥಿತವಾಗಿ ಕಳವು ಮಾಡುತ್ತಿದ್ದರು. ಆದರೆ, ಈ ರೀತಿ ಜಾಯಿಂಟ್ ಗಳನ್ನು ತೆರವು ಮಾಡಿದಲ್ಲಿ ಹಳಿ ಬಿಗಿತ ಕಳಕೊಂಡು ಸಡಿಲವಾಗುತ್ತದೆ. ಇದರಿಂದ ರೈಲು ಹಳಿ ತಪ್ಪಿ ಉರುಳಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈಲಿನ ಕ್ಲಿಪ್ ಕಳವು ಮಾಡುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ವಿಧ್ವಂಸಕ ಕೃತ್ಯದ ಉದ್ದೇಶ ಇದರ ಹಿಂದಿತ್ತಾ ಅನ್ನುವುದರ ಬಗ್ಗೆ ತನಿಖೆ ನಡೆಸಲಿದ್ದಾರೆ.