ಮಡಿಕೇರಿ: ಆರು ವರ್ಷದ ಬಾಲಕಿಯೊಬ್ಬಳು ಮನೆಯಂಗಳಕ್ಕೆ ಬಂದ ಹಾವನ್ನು ಹಿಡಿದಿದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ನಡೆದಿದೆ.
ಈಕೆ ಕಾವಾಡಿ ಗ್ರಾಮದ ರೋಷನ್ ಎಂಬವರ ಆರು ವರ್ಷದ ಮಗಳು ತನುಷಾ. ತನ್ನ ಎರಡು ವರ್ಷದ ತಂಗಿಯೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹಾವೊಂದು ಬರುತ್ತಿರುವುದನ್ನು ಕಂಡಿದ್ದಾಳೆ. ನೋಡುತ್ತಿದ್ದಂತೆ ಅದು ಮನೆಯ ಸಮೀಪದಲ್ಲೇ ಇರುವ ಪೊದೆಯೊಳಕ್ಕೆ ಹೋಗುತ್ತಿದ್ದನ್ನು ತನುಷಾ ನೋಡಿದ್ದಾಳೆ. ಕೂಡಲೇ ಮನೆಯೊಳಗಿದ್ದ ಅಮ್ಮನನ್ನು ಕೂಗಿ ಕರೆದು ಅಮ್ಮ ಹಾವು ಬಂದಿದೆ ಎಂದು ಹೇಳಿದ್ದಾಳೆ. ತಾಯಿ ಪವಿತ್ರಾ, ಮನೆಯಿಂದ ಹೊರ ಬರುವಷ್ಟರಲ್ಲಿ ಆ ಬಾಲಕಿ ಪೊದೆಯೊಳಕ್ಕೆ ಹೋಗುತ್ತಿದ್ದ ಹಾವನ್ನು ಹಿಡಿದು ಮನೆ ಮುಂದಿರುವ ಕಾಫಿ ಕಣಕ್ಕೆ ತಂದಿದ್ದಾಳೆ. ತನುಷಾ ಹಾವು ಹಿಡಿದು ತಂದಿರುವುದನ್ನು ಪವಿತ್ರಾ ಮತ್ತು ಅಕ್ಕಪಕ್ಕದ ಮನೆಯವರೆಲ್ಲರೂ ನೋಡಿ ಅಚ್ಚರಿಯ ಜೊತೆ ಭಯ ಕೂಡ ಉಂಟಾಗಿತ್ತು. ಆದರೆ ಬಾಲಕಿ ತನುಷಾ ಮಾತ್ರ ಯಾವ ಅಂಜಿಕೆಯೂ ಇಲ್ಲದೆ ಹಾವು ಹಿಡಿದು ತನಗೆ ಇಷ್ಟ ಬಂದಂತೆ ಹಾವನ್ನು ಎರಡೂ ಕೈಗಳಲ್ಲಿ ಎತ್ತಿ ಆಟವಾಡಿಸಿದ್ದಾಳೆ.
ತಂದೆ ಕೂಡ ಇದೇ ಕಾರ್ಯದಲ್ಲಿ :
ತನುಷಾಳ ತಂದೆ ರೋಷನ್ ಎಂಬವರು ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ತಂದೆ ಹಾವನ್ನು ಹಿಡಿಯುವುದನ್ನು ಕಂಡಿರುವ ತನುಷಾ ಕೂಡ ಹಾವನ್ನು ಹಿಡಿದಿದ್ದಾಳೆ ಎನ್ನುತ್ತಾರೆ ಮನೆಯ ಸ್ಥಳೀಯರು. ತನುಷಾಳ ತಾಯಿ ಮನೆಯಿಂದ ಹೊರ ಹೋಗಿದ್ದ ರೋಷನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಬಂದ ರೋಷನ್ ಮಗುವಿನ ಕೈಯಿಂದ ಹಾವನ್ನು ಪಡೆದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.