ವಿಜಯಪುರ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿಯೇ ಸಾವನ್ನಪ್ಪಿದ್ದಾನೆ.
ಈತನ ಸಾವನ್ನು ಲಾಕ್‌ಅಪ್ ಡೆತ್ ಎಂದು ಪೋಷಕರು ಆರೋಪ ಮಾಡುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸರು ಶನಿವಾರ ರಾತ್ರಿ ದೇವಿಂದ ಸಂಗೋಗಿ ಎಂಬ ಆರೋಪಿಯನ್ನು ಬಂಧಿಸಿದ್ದರು. ಭಾನುವಾರ ಬೆಳಗ್ಗೆ ಆರೋಪಿ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಯ ಪೋಷಕರು, ಸಂಬಂಧಿಕರು ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಮುಂಜಾನೆ ಶೌಚಾಲಯಕ್ಕೆ ತೆರಳಿದಾಗ ಆರೋಪಿ ನೇಣು ಹಾಕಿಕೊಂಡಿದ್ದ. ಇದನ್ನು ನೋಡಿದ ಸಿಬ್ಬಂದಿ ಆತನನ್ನು ರಕ್ಷಣೆ ಮಾಡಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಲಾಕ್‌ಅಪ್ ಡೆತ್ ಎನ್ನಬಹುದಾದರೂ ಪೊಲೀಸರ ಕಿರುಕುಳದಿಂದ ಸಾವನ್ನಪ್ಪಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಆದರೆ ಪೊಲೀಸರ ಸಮಜಾಯಿಷಿ ಒಪ್ಪದ ಪೋಷಕರು ಮತ್ತು ಸಂಬಂಧಿಕರು ಪೊಲೀಸರಿಂದಲೇ ದೇವಿಂದ ಸಂಗೋಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಕಾರಣದಿಂದಾಗಿ ಠಾಣೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗೃಹ ಸಚಿವ ಪ್ರತಿಕ್ರಿಯೆ ಘಟನೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ‘ವಿಜಾಪುರ ಜಿಲ್ಲೆಯ ಸಿಂದಗಿ ಪೋಲಿಸ್ ಸ್ಟೇಷನ್ ನಲ್ಲಿ ನಡೆದ ಲಾಕ್ ಅಪ್ ಡೆತ್ ಘಟನೆ ಕುರಿತು ಸಿ.ಐ.ಡಿ ತನಿಖೆ ಮಾಡಲಿದ್ದು, ಕಾನೂನು ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ತನಿಖೆ ನಡೆಸಲು ಸಿ.ಐ.ಡಿ ಪೊಲೀಸರು ಸಿಂದಗಿಗೆ ತೆರಳಿದ್ದು, ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡಲಿದ್ದಾರೆ’ ಎಂದು ಸಚಿವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್, “ಇಂತಹ ಘಟನೆಯಿಂದಾಗಿ ಸಹಜವಾಗಿ ಕುಟುಂಬದವರಿಗೆ ನೋವಾಗುತ್ತದೆ. ಆದರೆ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಪ್ರಾಪ್ತ ಬಾಲಕಿ ತಂದೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿ ದೇವಿಂದ ಸಂಗೋಗಿ ಪರಾರಿಯಾಗಿದ್ದ. ಸಿಂದಗಿ ಪೊಲೀಸರು ಶನಿವಾರ ರಾತ್ರಿ ಆರೋಪಿ ಬಂಧಿಸಿದ್ದರು. ಆದರೆ ಭಾನುವಾರ ಬೆಳಗ್ಗೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.