ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿರುವ ಗ್ಯಾಂಗ್‌ರೇಪ್ ಪ್ರಕರಣ ಕ್ಷಣಕ್ಷಣಕ್ಕೂ ಬೇರೆ ಬೇರೆ ರೂಪ ಪಡೆಯುತ್ತಿದ್ದು, ಇದೀಗ ತಾವು ರೇಪ್ ಮಾಡಿರುವ ಕಾರಣಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಐದು ಆರೋಪಿಗಳನ್ನು ಹೊರ ರಾಜ್ಯದಲ್ಲಿ ಬಂಧಿಸಿರುವ ಪೊಲೀಸರು ಇದಾಗಲೇ ಮೈಸೂರಿಗೆ ಕರೆತಂದಿದ್ದು, ಅವರು ಘಟನೆಗೆ ಸಂಬಂಧಿಸಿದಂತೆ ಒಂದೊಂದೇ ವಿಷಯಗಳನ್ನು ಹೊರಹಾಕುತ್ತಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿರುವ ಐದು ಮಂದಿ ಪೈಕಿ ಮೂರು ಮಂದಿ ಮಾತ್ರ ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ತನಿಖೆಗೆ ತಿಳಿದುಬಂದಿದೆ.
ಮೊದಲಿಗೆ ಇವರು ಈ ಜೋಡಿಯನ್ನು ಬೆದರಿಸಿ ದರೋಡೆ ಮಾಡುವ ಯೋಚನೆಯಲ್ಲಿದ್ದರಂತೆ. ಆರೋಪಿಗಳು ಹೇಳಿದ್ದೇನೆಂದರೆ, ‘ನಾವು ರೇಪ್ ಮಾಡುವ ಉದ್ದೇಶ ಹೊಂದಿರಲಿಲ್ಲ. ಈ ನಿರ್ಜನ ಪ್ರದೇಶದಲ್ಲಿ ಸಂತ್ರಸ್ತ ಯುವತಿ ಮತ್ತು ಯುವಕ ಕಳೆದ ಕೆಲ ದಿನಗಳಿಂದ ಬರುತ್ತಿದ್ದರು. ನಾವು ಮೂರು ದಿನಗಳಿಂದ ಅವರನ್ನು ಫಾಲೋ ಮಾಡಿದ್ದೆವು. ಅವರನ್ನು ನೋಡಿದ ನಂತರ ನಾವು ಮೊದಲು ಇಬ್ಬರನ್ನೂ ಬೆದರಿಸಿ ರಾಬರಿ ಮಾಡುವ ಯೋಚನೆ ಮಾಡಿದ್ದೆವು. ರೇಪ್ ಮಾಡುವ ಉದ್ದೇಶ ಇರಲೇ ಇಲ್ಲ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಆ ಜೋಡಿಯನ್ನು ನೋಡಿದ ಮೇಲೆ ನಮ್ಮ ಪೈಕಿ ಮೂವರು ರೇಪ್ ಮಾಡುವ ಯೋಚನೆ ಮಾಡಿದರು. ಆದರೆ ಇಬ್ಬರು ಅದಕ್ಕೆ ಒಪ್ಪಿರಲಿಲ್ಲ. ದರೋಡೆ ಮಾಡಿ ಅವರನ್ನು ಬಿಟ್ಟುಬಿಡುವ ಯೋಚನೆ ಇತ್ತು. ನಮ್ಮ ನಮ್ಮಲ್ಲೇ ಈ ಬಗ್ಗೆ ವಾದ-ಪ್ರತಿವಾದವೂ ಆಗಿತ್ತು. ಆದರೆ ಮೂವರು ಮಾತ್ರ ಕೇಳದೇ ರೇಪ್ ಮಾಡಿದ್ದಾರೆ, ಇಬ್ಬರು ಇದರಲ್ಲಿ ಭಾಗಿಯಾಗಿಲ್ಲ ಎಂದು ಆರೋಪಿಗಳು ತನಿಖೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಿಂದ ಮೈಸೂರು ಮಂಡಿಗಳಿಗೆ ಬಾಳೆ ಸಪ್ಲೈ ಮಾಡುತ್ತಿದ್ದ ಆರೋಪಿಗಳಿಗೆ ಇದು ಮಾಮೂಲು ಅಡ್ಡವಾಗಿತ್ತು. ಅಲ್ಲಿ ಬರುತ್ತಿರುವ ಈ ಜೋಡಿಯನ್ನು ಮೂರು ದಿನಗಳವರೆಗೆ ಫಾಲೋ ಮಾಡಿ ನಾಲ್ಕನೇ ದಿನ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಸಂಪೂರ್ಣ ತನಿಖೆಯಿಂದ ನಿಜಾಂಶ ಬೆಳಕಿಗೆ ಬರಬೇಕಿದೆ.
ಬೆಂಗಳೂರು ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಘಟನೆ ನಡೆದು 85 ಗಂಟೆಗಳ ಬಳಿಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ತಮಿಳುನಾಡಿನ ಸತ್ಯಮಂಗಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ತಮಿಳುನಾಡಿನಿಂದ ಮೈಸೂರು ಮಂಡಿಗಳಿಗೆ ಬಾಳೆ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಆರೋಪಿಗಳ ಪತ್ತೆಗೆ ಪೊಲೀಸರಿಗೆ ಸಹಾಯವಾಗಿದ್ದು ಬಸ್ ಟಿಕೆಟ್. ಗ್ಯಾಂಗ್ ರೇಪ್ ನಡೆದಿದ್ದ ಸ್ಥಳದಲ್ಲಿ ಸಿಕ್ಕಿದ್ದ ಆ ಒಂದು ಬಸ್ ಟಿಕೆಟ್ ಆರೋಪಿಗಳ ಹೆಜ್ಜೆ ಗುರುತು ಬಯಲು ಮಾಡಿತ್ತು.
ಆಗಸ್ಟ್ 24ರಂದು ಸಂಜೆ ಮೈಸೂರಿನ ಲಲಿತಾದ್ರಿ ಗುಡ್ಡ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.