ಅಫ್ಘಾನಿಸ್ತಾನ: ಕಾಬೂಲ್‍ನಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಣೆ ಹೊತ್ತುಕೊಂಡಿರುವ ಐಸಿಸ್-ಕೆ ಸಂಘಟನೆ ಆತ್ಮಾಹುತಿ ಬಾಂಬರ್ ಫೋಟೋವನ್ನು ಪ್ರಕಟಿಸಿದೆ.
ಆತನ ಹೆಸರು ಅಬ್ದುಲ್ ರೆಹಮಾನ್ ಅಲ್-ಲೊಘ್ರಿ. ಈತ ತನ್ನನ್ನೇ ತಾನು ಸ್ಫೋಟಿಸಿಕೊಂಡು ಬೇರೆಯವರ ಸಾವಿಗೂ ಕಾರಣವಾಗಿದ್ದು, ಆತನ ಚಿತ್ರವನ್ನು ಐಸಿಸ್ ಸಂಘಟನೆ ಪ್ರಕಟಿಸಿದೆ. ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ನಿನ್ನೆ ಸಂಭವಿಸಿದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕಂತ್ಯದ ಹೊಣೆಯನ್ನು ಹೊತ್ತುಕೊಂಡ ಐಸಿಸ್?-ಕೆ ಸಂಘಟನೆ ಟೆಲಿಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕಾಬೂಲ್‍ನಲ್ಲಿ ನಡೆದ ಎರಡೂ ಸ್ಫೋಟಗಳ ಹಿಂದೆ ನಮ್ಮದೇ ಕೈವಾಡ ಇದೆ ಎಂದು ಐಸಿಸ್- ಕೆ ಹೇಳಿಕೊಂಡಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಈ ಸರಣಿ ಸ್ಫೋಟದಲ್ಲಿ ಸುಮಾರು 60 ಜನ ಬಲಿಯಾಗಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಮೆರಿಕ ಸೇನೆಯ 12 ಜನ ಬಲಿಯಾಗಿದ್ದು, 15 ಜನರಿಗೆ ಗಾಯಗಳಾಗಿವೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆ ಇಲ್ಲ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಎಂದಿಗೂ ನಾವು ಮರೆಯುವುದಿಲ್ಲ. ನೀವು ಎಲ್ಲೇ ಇದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಮರೆಯುವುದಿಲ್ಲ. ಉಗ್ರರನ್ನು ಕೊಲ್ಲುವ ಮೂಲಕ ತಕ್ತ ಶಾಸ್ತಿ ಮಾಡುತ್ತೇವೆ. ಪ್ರತಿದಿನ ನಾನು ನಮ್ಮ ಕಮಾಂಡರ್‍ಗಳ ಜೊತೆ ಮಾತನಾಡುವಾಗ, ನಮ್ಮ ಕಾರ್ಯ ಸಾಧಿಸಲು ನಿಮಗೆ ಇನ್ನೇನು ನೆರವು ಬೇಕು ಎಂದು ಕೇಳುತ್ತೇನೆ. ಅವರ ಎಲ್ಲ ಬೇಡಿಕೆಗಳನ್ನ ನಾನು ಈಡೇರಿಸಿದ್ದೇನೆ. ಮೂರು ಪ್ರತ್ಯೇಕ ಬಾರಿ ಮಾತುಕತೆ ನಡೆಸಿದ್ದು, ಅವರಿಗೆ ಬೇಕಾದ ಎಲ್ಲವನ್ನೂ ಪೂರೈಸಲಾಗಿದೆ. ಇದಕ್ಕಾಗಿ ನಾನು ಅಮೆರಿಕದ ರಕ್ಷಣಾ ಇಲಾಖೆ ಮತ್ತು ಪೆಂಟಗನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ರಕ್ಷಣೆಗೆ ಯಾರನ್ನ ಕಳುಹಿಸಬೇಕು ನಮಗಾಗಿ ಯಾರು ಹೋಗ್ತೀರಿ ಎಂಬ ದೇವರ ಪ್ರಶ್ನೆಗೆ ಅಮೆರಿಕ ಸೇನೆ ಹಲವಾರು ವರ್ಷಗಳಿಂದ ಉತ್ತರ ನೀಡುತ್ತಿದೆ. ದೇವರೇ ನನ್ನನ್ನು ಕಳುಹಿಸಿ ಎಂದು ಉತ್ತರಿಸಿದೆ. ನಿನಗಾಗಿ ನಾನಿದ್ದೇನೆ ನನ್ನನ್ನೇ ಕಳುಹಿಸು ಎಂದು ಹೇಳುತ್ತಿದೆ. ಹೀಗಾಗಿ ಅಮೆರಿಕ ಎಂದೂ ಹಿಂದಡಿ ಇಡುವುದಿಲ್ಲ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.