ಬೆಂಗಳೂರು: ಕೆಲವು ದಿನಗಳಿಂದ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್‍ನ್ನು ಹೆಡೆಮುರಿ ಕಟ್ಟುವಲ್ಲಿ ವಿಜಯ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನದ ಆರೋಪದಡಿ ಬವಾರಿಯ ಗ್ಯಾಂಗ್‍ನ ರಾಹುಲ್, ಗೌರವ್, ನೀತಿನ್ ರಿಯಾಜ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉತ್ತರಪ್ರದೇಶದಿಂದ ಬಂದು ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಇವರು ಉತ್ತರಪ್ರದೇಶ, ದೆಹಲಿ, ಜಮ್ಮುಕಾಶ್ಮೀರದಿಂದ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಬೆಂಗಳೂರು ನಗರದ ವಿಜಯನಗರ, ಕೆಂಗೇರಿ, ತಿಲಕ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಸರಗಳ್ಳತನ ಜೊತೆಗೆ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಳ್ಳತನ ಮಾಡಿರುವುದು ಕೂಡ ತನಿಖೆಯ ವೇಳೆ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 13 ಲಕ್ಷ ಬೆಲೆ ಬಾಳುವ 260 ಗ್ರಾಂ. ಚಿನ್ನಾಭರಣ, 2,000 ಸಾವಿರ ನಗದು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪ್ರತ್ಯೇಕವಾಗಿ ಮೂರು ಗ್ಯಾಂಗ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಗಳು ವಿಜಯನಗರ ಪೊಲೀಸರ ವಶದಲ್ಲಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.