ಕಾಬೂಲ್: ಸಂಪೂರ್ಣ ಆಫ್ಘಾನಿಸ್ತಾನ ಕೈವಶ ಮಾಡಿಕೊಂಡು ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ತಾಲಿಬಾನ್ ಉಗ್ರರು, ಇತ್ತೀಚೆಗೆ ಮಹಿಳೆಯರಿಗೆ ಗೌರವ ನೀಡುವುದಾಗಿ ಹೇಳಿದ್ದರು. ಆದರೆ ಶರಿಯಾ ಕಾನೂನು ಜಾರಿ ಮಾಡಿ ಒಂದೊಂದೆ ನಿರ್ಬಂಧಗಳನ್ನು ಹೇರಿದೆ. ಇದೀಗ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಮಹಿಳೆ ಹಾಗೂ ಹೆಣ್ಣು ಮಕ್ಕಳ ಮೇಲೆ ಎಸಗುತ್ತಿರುವ ದೌರ್ಜನ್ಯದ ಕುರಿತು ಆಫ್ಘಾನಿಸ್ತಾನದಿಂದ ಪರಾರಿಯಾದ ಪತ್ರಕರ್ತ ಹಾಲಿ ಮೆಕೆ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಮಾಧ್ಯಮದ ಮುಂದೆ, ಜಗತ್ತಿನ ಮುಂದೆ ತಾಲಿಬಾನ್ ಉಗ್ರರು ಮಹಿಳೆಯರಿಗೆ ಗೌರವ ನೀಡುತ್ತೇವೆ. ಅವರ ಹಕ್ಕು ಕಸಿದುಕೊಳ್ಳುವುದಿಲ್ಲ. ನಾವು ಬದಲಾಗಿದ್ದೇವೆ ಎಂದಿತ್ತು. ಇದನ್ನೇ ಜಗತ್ತಿನ ಹಲವು ಮಾಧ್ಯಮಗಳು ಡಂಗುರ ಸಾರಿತ್ತು. ಆದರೆ ಅಸಲಿ ಕತೆ ಇದಲ್ಲ. ತಾಲಿಬಾನ್ ಉಗ್ರರು, ಮನೆ ಮನೆಗೆ ತೆರಳುತ್ತಿದ್ದಾರೆ. 15 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು, ಮಹಿಳೆಯರನ್ನು ಕೈ ಕಾಲು ಕಟ್ಟಿ ಹೊತ್ತೊಯ್ಯುತ್ತಿದ್ದಾರೆ ಎಂದು ಹಾಲಿ ಮೆಕೆ ಡಲ್ಲಾಸ್ ಮಾರ್ನಿಂಗ್ ನ್ಯೂಸ್‍ಗೆ ಬರೆದಿರುವ ಅಂಕಣದಲ್ಲಿ ಹೇಳಿದ್ದಾರೆ.
ತಾಲಿಬಾನ್ ಉಗ್ರರು 15 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಹುಡುಕಿ ಹೊತ್ತೊಯ್ದು ಮದುವೆಯಾಗುತ್ತಿದ್ದಾರೆ. ಕೈ ಕಾಲು ಕಟ್ಟಿ ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗುತ್ತಿದೆ. ಈ ಕುರಿತು ಆಫ್ಘಾನಿಸ್ತಾನ ಮಹಿಳೆ ಫಾಹಿರಾ ಎಸರ್ ಹೇಳಿದ ಕಣ್ಣೀರ ಕತೆಯನ್ನು ಹಾಲಿ ಮೆಕೆ ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.
21 ವರ್ಷ ಮಹಿಳೆಯನ್ನು ಮದುವೆಯಾಗಲು ನೀಡುವಂತೆ ಆಕೆಯ ತಂದೆಯ ಬಳಿ ತಾಲಿಬಾನ್ ಉಗ್ರರು ಬೇಡಿಕೆ ಇಟ್ಟಿದ್ದಾರೆ. ಕುಟುಂಬದ ಸದಸ್ಯರ ಹಣೆಗೆ ಗನ್ ಇಟ್ಟು ಬೆದರಿಸಿ ಆಕೆಯನ್ನು ಹೊತ್ತೊಯ್ದು ಕೈ ಕಾಲು ಕಟ್ಟಿ ಮದುವೆಯಾಗಿದ್ದಾರೆ. ಒರ್ವ ಉಗ್ರ ಮದುವೆಯಾಗಿದ್ದಾನೆ. ಬಳಿಕ ಪ್ರತಿ ದಿನ 4 ರಿಂದ 5 ಮಂದಿ ಉಗ್ರರು ಸಾಮೂಹಿಕವಾಗಿ ಲೈಂಗಿಕ ಅತ್ಯಾಚಾರ ಎಸಗುತ್ತಿದ್ದಾರೆ. ಈ ಘೋರ ಘಟನೆ ಕಣ್ಣ ಮುಂದೆ ನಡೆಯುತ್ತಿದೆ ಎಂದು ಫಹಿರಾ ಎಸರ್ ಹೇಳಿದ್ದಾರೆ.
ತಾಲಿಬಾನ್ ಉಗ್ರರ ವರ್ತನೆ, ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜಗತ್ತಿಗೆ ತಾವು ಸರ್ಕಾರ ನಡೆಸುತ್ತೇವೆ ಎಂದು ತೋರಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ತಾಲಿಬಾನ್ ಕೈಯಲ್ಲಿ ಆಫ್ಘಾನ್ ಹೆಣ್ಣು ಮಕ್ಕಳು ನರಳಾಡುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ಯಾವ ಮಾಧ್ಯಮ ತಾಲಿಬಾನ್ ವಿರುದ್ಧ ಹೆಜ್ಜೆ ಇಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಹೆಣ್ಣು ಮಕ್ಕಳ ಹೋರಾಟಗಾರ್ತಿ ಫಹಿರಾ ಹೇಳಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಪತ್ರಕರ್ತ ಹಾಲಿ ಮೆಕೆ ಅಂಕಣದಲ್ಲಿ ಹೇಳಿದ್ದಾರೆ.