ಸಮಗ್ರ ನ್ಯೂಸ್: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಮಳೆಯ ಅಬ್ಬರ ಮುಂದುವರಿದಿದೆ. ಕೆಲವೆಡೆ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಿನವಿಡೀ ಧಾರಾಕಾರ ಮಳೆಯಾಗಿದೆ. ಗಾಳಿಯೂ ಜೋರಾಗಿತ್ತು.
ಪಶ್ಚಿಮ ಘಟ್ಟ ಹಾಗೂ ಘಟ್ಟದ ಮೇಲ್ಭಾಗದಲ್ಲೂ ಭಾರಿ ಮಳೆಯಾಗಿದ್ದರಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡಿರುವ ಭಕ್ತರು ಸ್ನಾನಘಟ್ಟದ ಬಳಿ ನದಿಯ ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಭಾಗಮಂಡಲದಲ್ಲಿ 22.50 ಸೆಂ.ಮೀ ಮಳೆ ಸುರಿದಿದ್ದು, ಕಾವೇರಿ ನದಿ ಉಕ್ಕಿ ಹರಿದಿದೆ. ಹಾಸನದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ, ಅಂಗನವಾಡಿಯಿಂದ ಹಿಡಿದು ಪಿಯುಸಿ ವರೆಗಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಮಂಗಳವಾರ ಮತ್ತು ಬುಧವಾರ ರಜೆ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಳೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಏಚಗಳ್ಳಿಯಲ್ಲಿ ವಿದ್ಯುತ್ ತಂತಿ ತುಳಿದು ಸಿದ್ದರಾಜು (55), ಬೆಳಗಾವಿ ಜಿಲ್ಲೆಯ ಗೋಕಾಕದ ಮಹಾಲಿಂಗೇಶ್ವರ ಕಾಲೊನಿಯಲ್ಲಿ ಸೋಮವಾರ ನಸುಕಿನಲ್ಲಿ ಮನೆ ಗೋಡೆ ಕುಸಿದು, ಮೂರು ವರ್ಷದ ಬಾಲಕಿ ಕೃತಿಕಾ ನಾಗೇಶ ಪೂಜಾರಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತ ಕಲ್ಲಪ್ಪ ಧರೆಪ್ಪ ಅಂಬಿ (65) ಭಾನುವಾರ ಕೃಷ್ಣಾ ನದಿಯಲ್ಲಿ ಈಜುತ್ತ ತಮ್ಮ ಜಮೀನಿಗೆ ಹೋಗುವಾಗ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕರಾವಳಿ ಕರ್ನಾಟಕದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದ ರೀತಿಯಲ್ಲೇ ಭಾರಿ ಮಳೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು. ಉಳಿದಂತೆ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರವೂ ಕೂಡ ಉತ್ತಮ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ಮಳೆ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇರಲಿದೆ. ಕೆಲವು ಕಡೆ ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಅಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಇನ್ನುಳಿದ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಗುಡುಗು ಸಹಿತ ಮಳೆ ಅಥವಾ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಂದಿನ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.