ಸಮಗ್ರ ನ್ಯೂಸ್: ಚಿನ್ನಾಭರಣ ಸಾಲದ ನಿಯಮ ಈಗ ಹೊರೆಯಾಗಿ ಪರಿಣಮಿಸಿದೆ. ವಾಯಿದೆ ಮುಕ್ತಾಯದ ನಂತರ ಅಸಲು ಪಾವತಿ ಕಡ್ಡಾಯ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಪಡೆದುಕೊಳ್ಳುವ ಚಿನ್ನಾಭರಣ ಸಾಲವನ್ನು ನಿಗದಿತ ಅವಧಿಯ ಕೊನೆಗೆ ಬಡ್ಡಿ ಮಾತ್ರ ಪಾವತಿಸಿ ಗ್ರಾಹಕರು ನವೀಕರಿಸುತ್ತಿದ್ದರು. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೊರಡಿಸಿದ ಸುತ್ತೋಲೆ ಸಾಲಗಾರರಿಗೆ ಹೊರೆಯಾಗಿ ಪರಿಣಮಿಸಿದೆ.
ಬಡ್ಡಿಯನ್ನಷ್ಟೇ ಪಾವತಿಸಿ ಸಾಲ ನವೀಕರಿಸುವಂತಿಲ್ಲ ಎಂದು ಆರ್.ಬಿ.ಐ. ಬ್ಯಾಂಕುಗಳಿಗೆ ತಾಕೀತು ಮಾಡಿದೆ. ಸಾಲ ಪಡೆದವರು ಬಡ್ಡಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಅಸಲು ಪಾವತಿಸಬೇಕು. ನಂತರ ಹೊಸ ಅರ್ಜಿ ಸಲ್ಲಿಸಿ ಮತ್ತೆ ಸಾಲ ಪಡೆಯಬಹುದು ಎಂದು ಹೇಳಲಾಗಿದೆ.
ಈ ಮೊದಲಿನಿಂದಲೂ ವಾಯಿದೆ ಮುಗಿದ ನಂತರ ಅಸಲು, ಬಡ್ಡಿ ಪೂರ್ಣ ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಕೇವಲ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಿಸುತ್ತಿದ್ದರು. ಸಾಲ ನೀಡಿಕೆ ಪಾರದರ್ಶಕ, ವ್ಯವಸ್ಥಿತವಾಗಿರಲಿ ಎನ್ನುವ ಕಾರಣಕ್ಕೆ ಆರ್ಬಿಐ ಸುತ್ತೋಲೆ ಹೊರಡಿಸಿದ್ದು, ಅದನ್ನು ಬ್ಯಾಂಕುಗಳು ಪಾಲಿಸುವುದು ಅನಿವಾರ್ಯ ಎನ್ನುವಂತಾಗಿದೆ.
ಅನೇಕರು ತಮ್ಮಲ್ಲಿನ ಚಿನ್ನ ಒತ್ತೆ ಇಟ್ಟು ಸಾಲ ಪಡೆದಿರುತ್ತಾರೆ. ಅಸಲು ಹೊಂದಿಸುವವರೆಗೆ ಬಡ್ಡಿ ಪಾವತಿಸಿ ಸಾಲ ನವೀಕರಿಸಿಕೊಳ್ಳುತ್ತಾರೆ. ಖಾಸಗಿ ಲೇವಾದೇವಿದಾರರು ಮತ್ತು ಹಣಕಾಸು ಸಂಸ್ಥೆಗಳ ದುಬಾರಿ ಬಡ್ಡಿಗೆ ಹೋಲಿಸಿದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ದರ ಕಡಿಮೆ ಇರುತ್ತದೆ. ಹೀಗಾಗಿ ಚಿನ್ನಾಭರಣ ಒತ್ತೆ ಇಟ್ಟು ಸಾಲ ಪಡೆದುಕೊಳ್ಳುತ್ತಾರೆ. ಆದರೆ ವಾಯಿದೆ ಮುಗಿದ ನಂತರ ಸಾಲ ಪಡೆದವರು ಬಡ್ಡಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಮೊತ್ತವನ್ನು ಮರುಪಾವತಿಸಬೇಕೆನ್ನುವ ನಿಯಮದಿಂದ ಸಾಲಗಾರರಿಗೆ ತೊಂದರೆಯಾಗಿದೆ.