ಸಮಗ್ರ ನ್ಯೂಸ್: ರಾಮನಗರದಲ್ಲಿ ನಡೆದಿದ್ದ ದಿವ್ಯಾಂಗ ಬಾಲಕಿಯ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಮರ್ಡರ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆದರೆ ಇದೀಗ ಮರ್ಡರ್ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಅತ್ಯಾಚಾರ ನಡೆದಿಲ್ಲವೆಂಬುದು ಎಫ್ಎಸ್ಎಲ್ (FSL) ವರದಿಯಲ್ಲಿ ಧೃಡಪಟ್ಟಿದೆ.
ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದ್ದ 14 ವರ್ಷದ ದಿವ್ಯಾಂಗ ಬಾಲಕಿಯ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್ ಸಿಕ್ಕಿದ್ದು, ಮೇಲ್ನೋಟಕ್ಕೆ ಬಾಲಕಿಯದ್ದು ಕೊಲೆ ಅಲ್ಲ, ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ. ಜೊತೆಗೆ ಬಾಲಕಿಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲವೆಂಬುವುದು ಎಫ್ಎಸ್ಎಲ್ ವರದಿಯಲ್ಲಿ ಧೃಡವಾಗಿದೆ.
ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯ 14 ವರ್ಷದ ದಿವ್ಯಾಂಗ ಬಾಲಕಿ ಮೇ 11 ರ ಸಂಜೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಆನಂತರ ಮೇ 12 ರಂದು ಹಕ್ಕಿಪಿಕ್ಕಿ ಕಾಲೋನಿ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿಯ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಈ ನಿಟ್ಟಿನಲ್ಲಿ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ವಿಶೇಷ ತಂಡಗಳನ್ನ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಬಿಡದಿ ಪೊಲೀಸರು, ಮರಣೋತ್ತರ ಪರೀಕ್ಷೆ ಜೊತೆಗೆ ಎಫ್ಎಸ್ಎಲ್ಗೂ ಕಳುಹಿಸಿದ್ದರು. ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಬಾಲಕಿಯ ಮೇಲೆ ಯಾವುದೇ ಅತ್ಯಾಚಾರ ನಡೆದಿರುವುದು ಧೃಡವಾಗಿಲ್ಲ. ಜೊತೆ ಬಾಲಕಿಯ ಮೇಲೆ ಯಾವುದೇ ಸುಟ್ಟ ಗುರುತುಗಳು ಪತ್ತೆಯಾಗಿಲ್ಲ. ಅಲ್ಲದೆ ಸಿಸಿ ಟಿವಿ ಆಧಾರದ ಮೇಲೆ ಮೇಲ್ನೋಟಕ್ಕೆ ರೈಲು ಡಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಪೊಲೀಸರ ಕೈ ಸೇರಿರುವ FSL ವರದಿಯಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲದಿರುವುದು ಗೊತ್ತಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯಿಂದ ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬುವುದು ತಿಳಿಯಲಿದೆ. ಮರಣೋತ್ತರ ವರದಿ ಸೋಮವಾರ ಪೊಲೀಸರ ಕೈ ಸೇರಲಿದೆ. ಆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು ಬಾಲಕಿಯ ಸಾವಿನ ಸುದ್ದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.