ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಹುಕಾಲದ ಬೇಡಿಕೆಯಾಗಿದ್ದ ಪಡೀಲ್‌ನಲ್ಲಿ ನಿರ್ಮಿಸಿರುವ ಸುಸಜ್ಜಿತ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ “ಪ್ರಜಾ ಸೌಧ’ದ ಉದ್ಘಾಟನೆಯನ್ನು ಇಂದು ಮೇ 16 ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.
ಸ್ಟೇಟ್‌ಬ್ಯಾಂಕ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಎಲ್ಲ ಇಲಾಖೆಗಳು ಈ ನೂತನ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿವೆ. ನೂತನ ಕಚೇರಿಯಲ್ಲಿ ಸುಮಾರು 23 ಇಲಾಖೆಗಳ ಕಾರ್ಯಾಚರಣೆ ಆರಂಭವಾಗಲಿದೆ. ಆಧುನಿಕ ವ್ಯವಸ್ಥೆ ಯೊಂದಿಗೆ ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮೇ 16ರಂದು ಮಧ್ಯಾಹ್ನ 3.20ಕ್ಕೆ ಆಗಮಿಸಲಿದ್ದು, ಉರ್ವಾ ಮಾರ್ಕೆಟ್‌ನಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸುವರು. ಸಂಜೆ 4.15 ಕ್ಕೆ “ಪ್ರಜಾಸೌಧ’ ಉದ್ಘಾಟಿಸುವರು. ಐತಿಹಾಸಿಕ ದರ್ಖಾಸ್ತು ಪೋಡಿ ಅಭಿಯಾನದ ಅಂಗವಾಗಿ 8000 ಮಂದಿಗೆ ಆರ್‌ಟಿಸಿ ವಿತರಣೆ, ಗುರುಪುರ ನಾಡ ಕಚೇರಿ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆ ಕಚೇರಿ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ವಿವಿಧ ಸರಕಾರಿ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6.30ಕ್ಕೆ ಉಳ್ಳಾಲ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಉರೂಸ್ ನಲ್ಲಿ ಪಾಲ್ಗೊಂಡು, ಬಳಿಕ ಬೆಂಗಳೂರಿಗೆ ನಿರ್ಗಮಿಸುವರು.
ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಸತಿ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸುವರು.