ಸಮಗ್ರ ನ್ಯೂಸ್: ಭಾರತದ ಮೇಲೆ ಪಾಕಿಸ್ತಾನ ಮತ್ತೋಮ್ಮೆ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಗಡಿ ಪ್ರದೇಶಗಳ ಮೇಲೆ ಪಾಕ್ ಡ್ರೋನ್ ದಾಳಿ ನಡೆಸಿದೆ. ಇಂದು (ಮೇ 09) ಬೆಳಗ್ಗೆಯಿಂದ ಯಾವುದೇ ಡ್ರೋನ್ ದಾಳಿಗಳು ಆಗಿರಲಿಲ್ಲ. ಬದಲಿಗೆ ಪಾಕ್ ಆಗಾಗ ಬಾರ್ಡರ್ನಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತ ಸಹ ತಿರುಗೇಟು ನೀಡಿತ್ತು. ಆದ್ರೆ, ಇದೀಗ ರಾತ್ರಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಪಾಕ್ ದಾಳಿ ನಡೆಸುತ್ತಿದ್ದಂತೆಯೇ ಜಮ್ಮು -ಕಾಶ್ಮೀರದಲ್ಲಿ ಸೈರನ್ ಮೊಳಗಿದೆ. ಕೂಡಲೇ ಅಲರ್ಟ್ ಆದ ಭಾರತೀಯ ಸೇನೆ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಇನ್ನೂ ರಾಜಸ್ಥಾನದ ಜೈಸಲ್ಮೇರ್, ಜಮ್ಮುವಿನ ಪಠಾಣ್ ಕೋಟ್, ಪಂಜಾಬ್‌ನ ಫಿರೋಜ್ ಪುರ್‌ನಲ್ಲೂ ಬ್ಲಾಕ್ ಔಟ್ ಘೋಷಣೆ ಆಗಿದೆ. ಜಮ್ಮುವಿನಲ್ಲಿ ಎಲ್ಲಾ ರೈಲುಗಳ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಆದೇಶದವರೆಗೂ ಎಲ್ಲಾ ರೈಲುಗಳ ಸಂಚಾರ ಸಿಲ್ಲಿಸುವಂತೆ ಸಂದೇಶ ರವಾನಿಸಲಾಗಿದೆ. ಅಲ್ಲದೇ ರೈಲುಗಳಲ್ಲಿರುವ ಪ್ರಯಾಣಿಕರು ತಮ್ಮ ಮೊಬೈಲ್ ಲೈಟ್ ಬಳಸದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಶ್ರೀನಗರದಲ್ಲಿ ಬ್ಲ್ಯಾಕೌಟ್ ಮಾಡಲಾಗಿದೆ.
ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಯಾರು ಮನೆಯಿಂದ ಆಚೆ ಬರಬೇಡಿ ಎಂದಿದ್ದಾರೆ. ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ. ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಒಮರ್ ಅಬ್ದುಲ್ಲಾ ಜನರಿಗೆ ಮನವಿ ಮಾಡಿಕೊಂಡಿದ್ದಾರೆ