ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿರುವ, ಕನ್ನಡದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮವಿವಾಹ ಆಗಿದ್ದಾರೆ. ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ
ಮಾಡುತ್ತಿದ್ದ ಅಭಿಷೇಕ್ ಎನ್ನುವವರ ಜೊತೆ ಮಾರ್ಚ್ 27ರಂದು ವಿವಾಹವಾಗಿದ್ದು, ಇಪ್ಪತ್ತು ದಿನಗಳ ನಂತರ ಗಾಯಕಿಯ ತಂದೆ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡುವ ಕನಸು ಹೊತ್ತಿದ್ದೆ. ಈ ವಿಷಯವನ್ನು ಜೀ ಕನ್ನಡವಾಹಿನಿಯ ಸರಿಗಮಪ ಶೋನಲ್ಲಿ ಜ್ಯೂರಿಯಾಗಿರೋ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಎನ್ನುವವರಿಗೆ ತಿಳಿಸಿದ್ದೆ. ಅವರು ಪೃಥ್ವಿ ಭಟ್ ಪ್ರೇಮಿಸುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದರು. ನಾನು ನನ್ನ ಮಗಳನ್ನು ಕೇಳಿದಾಗ, ನೀವು ತೋರಿಸಿದ ಹುಡುಗನ ಜೊತೆಯೇ ಮದುವೆ ಆಗುತ್ತೇನೆ ಅಂತ ದೇವರ ಮೇಲೆ ಪ್ರಮಾಣ ಮಾಡಿದ್ದಳು. ಆದರೆ, ಇದೀಗ ನನ್ನ ಮಗಳನ್ನು ಆ ನರಹರಿ ದೀಕ್ಷಿತ್ ಧಾರೆ ಎರೆದು ಕೊಟ್ಟಿದ್ದಾರೆ. ಮದುವೆಯ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ ಅಂತ ಪೃಥ್ವಿ ಭಟ್ ತಂದೆ ಆಡಿಯೋ ಮೂಲಕ ಹೊರಹಾಕಿದ್ದಾರೆ.
ಮಗಳನ್ನು ಕೂರಿಸಿಕೊಂಡು ಮಾತಾಡಿದಾಗ, ಹುಡುಗನೊಬ್ಬ ನನ್ನ ಹಿಂದೆ ಬಿದ್ದಿರೋದು ನಿಜ. ಆದರೆ, ನೀವು ಇಷ್ಟಪಟ್ಟರೆ ಮಾತ್ರ ಮುಂದುವರೆಯುವೆ. ಇಲ್ಲದಿದ್ದರೆ, ನೀವು ತೋರಿಸಿದ ಹುಡುಗನ ಜೊತೆಯೇ ಹೊಸ ಜೀವನಕ್ಕೆ ಕಾಲಿಡುತ್ತೇನೆ ಅಂತ ಪೃಥ್ವಿ ಭಟ್ ತಂದೆ ತಾಯಿಯ ಮೇಲೆ ಪ್ರಮಾಣ ಮಾಡಿದ್ದರಂತೆ. ಆ ಪ್ರಮಾಣ ಮುರಿದುಕೊಂಡು ಮದುವೆ ಆಗಿದ್ದಾರೆ. ಹಾಗಾಗಿ ಆಕೆ ನನ್ನ ಮನೆಗೆ ಬರೋದು ಬೇಡ ಅಂತ ತಿಳಿಸಿದ್ದಾಗಿ ಪೃಥ್ವಿ ಅವರ ತಂದೆಯು ಹೇಳಿಕೊಂಡಿದ್ದಾರೆ.
ಹವ್ಯಕ ಸಮಾಜವು ನರಹರಿ ದೀಕ್ಷಿತ್ ಅಂಥವರಿಗೆ ಪ್ರೋತ್ಸಾಹ ಮಾಡಬಾರದು ಅಂತ ಪೃಥ್ವಿ ತಂದೆ ಮನವಿ ಮಾಡಿಕೊಂಡಿದ್ದಾರೆ. ಇದ್ದೊಬ್ಬ ಮಗಳ ಧಾರೆಯರೆಯದಂತೆ ನರಹರಿ ಮಾಡಿದ್ದಾರೆ. ನಾನು ನೋವಿನಿಂದಲೇ ಈ ಸಂಗತಿಯನ್ನು ಹಂಚಿಕೊಳ್ಳುತ್ತಿರುವೆ ಅಂತ ಆಡಿಯೋವೊಂದನ್ನು ಮಾಡಿ, ಹವ್ಯಕ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಪೃಥ್ವಿ ತಂದೆ. ಆ ಆಡಿಯೋ ಈಗ ವೈರಲ್ ಆಗಿದೆ.