ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದ ಪೂರ್ವ ಮುಂಗಾರು ಮಳೆ ಕೊಂಚ ತಣ್ಣಗಾಗಿದೆ. ಉತ್ತರ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಆಗಾಗ ಸುರಿಯುತ್ತಿದೆ. ಬುಧವಾರ ಉತ್ತರ ಕರ್ನಾಟಕದ ವಿವಿಧೆಡೆ ಭರ್ಜರಿ ಮಳೆ ದಾಖಲಾಗಿದೆ. ಮುಂದಿನ 3 ರಿಂದ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ.
ಅರ್ಧ ರಾಜ್ಯಕ್ಕೆ ಉಷ್ಣದ ಅಲೆ ಎಚ್ಚರಿಕೆ ಇದ್ದು, ಮುಂದೆ ಎಲ್ಲ ಭಾಗಗಳಲ್ಲೂ ಸಹ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ. ಹವಾಮಾನ ಇಲಾಖೆ ಪ್ರಕಾರ, ದಾವಣಗೆರೆ, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಬಳ್ಳಾರಿ, ತುಮಕೂರು ಭಾಗಗಳಲ್ಲಿ ಮುಂದಿನ ಮೂರು ದಿನ ಆಗಾಗ ಸಾಧಾರಣದಿಂದ ಜೋರು ಮಳೆ ಆಗುವ ಸಂಭವವಿದೆ.
ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕಲಬುರಗಿ, ಬೀದರ್, ಕಾರವಾರ, ಬೆಳಗಾವಿ, ಹಾವೇರಿ, ಬಳ್ಳಾರಿ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಗರಿಷ್ಠ ತಾಪಮಾನದಲ್ಲಿ ತೀವ್ರ ಇಳಿಕೆ ಸೂಚನೆಗಳು ಇಲ್ಲ. ಆಗಾಗ ಕೆಲವು ಹೊತ್ತು ಮಬ್ಬು ವಾತಾವರಣ ಸೃಷ್ಟಿಯಾದರೂ ಸಹಿತ ಇಡೀ ದಿನ ಸೆಕೆ, ಉಷ್ಣ ಅಲೆಯ ಪ್ರಭಾವ ಇರಲಿದೆ.