ರಾಜ್ಯಾದ್ಯಂತ ನಾಳೆಯಿಂದ 9 ರಿಂದ 12 ತರಗತಿಯವರೆಗಿನ ಶಾಲೆಗಳು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಶಾಲಾರಂಭದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿನ ಸಿದ್ಧಾರ್ಥ ಗ್ರಾಮಾಂತರ ಪ್ರೌಢಶಾಲೆಗೆ ಭೇಟಿ ನೀಡಿ ಶಾಲಾರಂಭದ ಸಿದ್ಧತೆ ಹಾಗೂ ಕೈಗೊಂಡಿರುವ ಸೂಕ್ತ ಕ್ರಮಗಳ ಬಗ್ಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ತಾಂತ್ರಿಕ ಹಾಗೂ ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಆನ್ಲೈನ್ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ.
ಮೊಬೈಲ್ ಮೂಲಕ ನೀಡುವ ಶಿಕ್ಷಣ ಮಕ್ಕಳಲ್ಲಿ ಕಲಿಕಾಸಕ್ತಿ ಕಡಿಮೆ ಆಗುತ್ತಿರುವುದು, ಅಂತರ್ಜಾಲ ಸಮಸ್ಯೆ ಮತ್ತಿತರ ತಾಂತ್ರಿಕ ಸಮಸ್ಯೆಗಳು ಕಂಡುಬಂದಿತ್ತು. ಹಾಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಕೋವಿಡ್ ಸೋಂಕು ಕಡಿಮೆಯಾಗಿರುವುದರಿಂದ ಮತ್ತು ಟಾಸ್ಕ್ ಫೋರ್ಸ್ ಸಮಿತಿ ಹಾಗೂ ತಾಂತ್ರಿಕ ಸಲಹೆಗಾರರ ಸಲಹೆ ಮೇರೆಗೆ ಆಫ್ಲೈನ್ ತರಗತಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿಗಳು ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ 9, 10, 11, 12ನೇ ತರಗತಿಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ತರಗತಿಗಳನ್ನು ಪ್ರಾರಂಭಿಸಲು ರಾಜ್ಯದ ಎಲ್ಲಾ ಡಿಡಿಪಿಐ ಗಳೊಂದಿಗೆ ಸಭೆ ನಡೆಸಿದ್ದು, ಮಕ್ಕಳು ಶಾಲೆಗೆ ಬರಲು ಸಿದ್ಧರಿದ್ದಾರೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿರುವುದರಿಂದ ಶಾಲೆಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಾರಂಭವಾಗಲಿರುವ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ, ಕೋವಿಡ್ ಮಾರ್ಗಸೂಚಿಗಳನ್ನು ಕೈಗೊಂಡಿರುವ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪೋಷಕರಿಂದ ಅನುಮತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದವರಿಗೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶವಿಲ್ಲ. ಲಸಿಕೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗದಿರುವವರ ರಜೆಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.