ಶ್ರೀನಗರ: ತಾಲಿಬಾನ್ ಅಧಿಕಾರ ವಶಪಡಿಸಿಕೊಂಡು, ಅಮೆರಿಕವನ್ನು ಅಫ್ಘಾನಿಸ್ತಾನದಿಂದ ಪಲಾಯನ ಮಾಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಅಫ್ಘಾನಿಸ್ತಾನದಿಂದ ಪಾಠ ಕಲಿಯಲಿ. ಅಲ್ಲದೆ 2019ರಲ್ಲಿ ರದ್ದು ಮಾಡಿರುವ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲಿ ಎಂದು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಮ್‍ನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ನಮ್ಮನ್ನು ಪರೀಕ್ಷಿಸಬೇಡಿ. ಸರ್ಕಾರ ಮಾರ್ಗಗಳನ್ನು ಸರಿಪಡಿಸಿಕೊಂಡು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಪಕ್ಕದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಎಂದು ಹೇಳಿದ್ದಾರೆ.
ಸೂಪರ್ ಪವರ್ ಆಗಿರುವ ಅಮೆರಿಕ ಗಂಟು ಮೂಟೆ ಕಟ್ಟಿಕೊಂಡು ಪಲಾಯನ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ರೀತಿ ಜಮ್ಮು ಕಾಶ್ಮೀರದೊಂದಿಗೆ ಮಾತುಕತೆ ನಡೆಸಲು ನಿಮಗೆ ಇನ್ನೂ ಸಮಯವಿದೆ. ಜಮ್ಮು ಕಾಶ್ಮೀರವನ್ನು ಕಾನೂನುಬಾಹಿರವಾಗಿ ಮತ್ತು ಅಸಂವಿಧಾನಿಕವಾಗಿ ಕಿತ್ತುಕೊಳ್ಳುವುದು. ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿರುವ ನಿಮ್ಮ ತಪ್ಪನ್ನು ತಕ್ಷಣ ಸರಿಪಡಿಸಿ, ತಡವಾದರೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗನ್ ಹಾಗೂ ಕಲ್ಲುಗಳನ್ನು ಹಿಡಿಯುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ತಾಲಿಬಾನಿಗಳು ಇದೀಗ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ಮೂಲಕ ಅಮೆರಿಕ ಪಲಾಯನ ಮಾಡುವಂತೆ ಮಾಡಿದ್ದಾರೆ. ಇಡೀ ವಿಶ್ವ ಅವರತ್ತ ನೋಡುತ್ತಿದೆ. ಅವರು ಹೇಗೆ ವರ್ತಿಸುತ್ತಿದ್ದಾರೆ? ಹೇಗೆ ಕಟ್ಟುನಿಟ್ಟು ಪಾಲಿಸುತ್ತಾರೆ, ಜನರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.