ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ಡಬ್ಬಲ್ ಚೋಲ್ ಧಾರಣೆ ಕೆ.ಜಿ.ಗೆ 500 ರೂ. ದಾಟಿದ ಬೆನ್ನಲ್ಲೇ ಇದೀಗ ಸಿಂಗಲ್ ಚೋಲ್ ಧಾರಣೆಯು ಕೆ.ಜಿ.ಗೆ 500 ರೂ.ದಾಟಿ ದಾಖಲೆ ನಿರ್ಮಿಸಿದೆ. ಹೊಸ ಅಡಿಕೆ ಧಾರಣೆಯು ಶೀಘ್ರವೇ 500 ರೂ. ತಲುಪುವ ನಿರೀಕ್ಷೆಯಿದೆ.
ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು ಇದರ ಪರಿಣಾಮ ಧಾರಣೆ ಏರಿಕೆಯಾಗಿದೆ. ಧಾರಣೆ ಇನ್ನಷ್ಟು ಏರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಡಬ್ಬಲ್ ಚೋಲ್ ಧಾರಣೆ ಹತ್ತು ದಿನಗಳ ಹಿಂದೆಯೇ 500 ರೂ. ದಾಟಿತ್ತು. ಇದೀಗ ಸಿಂಗಲ್ ಚೋಲ್ ಸರದಿ. ಡಬ್ಬಲ್ ಚೋಲ್‌ಗೆ ಸ್ಪರ್ಧೆ ಎನ್ನುವಂತೆ ಸಿಂಗಲ್ ಚೋಲ್ ಧಾರಣೆ 500 ರೂ. ದಾಟಿದೆ. ಎ.12 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 530 ರೂ., ಸಿಂಗಲ್ ಚೋಲ್ ಧಾರಣೆ 520 ರೂ. ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 510, ಸಿಂಗಲ್ ಚೋಲ್ ಧಾರಣೆ 500 ರೂ. ಇತ್ತು.
ನಿರೀಕ್ಷೆಯಲ್ಲಿ ಹೊಸ ಅಡಿಕೆ:
ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆಯಂತೆ ಹೊಸ ಅಡಿಕೆ ಧಾರಣೆಯು ಏರಿಕೆಯ ಸೂಚನೆ ನೀಡಿದೆ. ಎ.12 ರಂದು ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 472 ರೂ. ಇದ್ದರೆ, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 440 ರೂ. ಇತ್ತು. ಸದ್ಯದಲ್ಲೇ ಹೊಸ ಅಡಿಕೆ ಧಾರಣೆ 500 ರೂ. ತಲುಪುವ ನಿರೀಕ್ಷೆ ಮೂಡಿದೆ.
ಕಾಳುಮೆಣಸು, ರಬ್ಬರ್ ಇಳಿಕೆ..!
700 ರೂ. ಗಡಿ ದಾಟಿದ್ದ ಕಾಳುಮೆಣಸು ಧಾರಣೆ ಕೊಂಚ ಇಳಿಕೆ ಕಂಡಿದೆ. ಎ.2 ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 710 ರೂ., ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 695 ರೂ.ದಾಖಲಾಗಿತ್ತು. ಎ.12 ರಂದು ಕೆ.ಜಿ.ಗೆ 685 ರೂ. ಇತ್ತು. 203 ರೂ. ದಾಟಿದ್ದ ರಬ್ಬರ್ ಗ್ರೇಡ್ ಧಾರಣೆ 192 ಕ್ಕೆ ಇಳಿದಿದೆ. 133.5 ರೂ. ತಲುಪಿದ್ದ ರಬ್ಬರ್ ಸ್ಕ್ರ್ಯಾಪ್ ಧಾರಣೆ 124 ಕ್ಕೆ ಕುಸಿದಿದೆ. ಕೊಕ್ಕೊ ಧಾರಣೆಯು ಸತತವಾಗಿ ಕುಸಿತ ಕಂಡಿದ್ದು ಹಸಿ ಕೊಕ್ಕೊ ಕೆ.ಜಿ.ಗೆ 120 ರೂ., ಒಣ ಕೊಕ್ಕೊ ಕೆ.ಜಿ.ಗೆ 470 ರೂ.ಗೆ ಇಳಿಕೆ ಕಂಡಿದೆ. ತೆಂಗಿನಕಾಯಿ. ಕೊಬ್ಬರಿ ಧಾರಣೆ ಯಥಾಸ್ಥಿತಿಯಲ್ಲಿದೆ.