ಸಮಗ್ರ ನ್ಯೂಸ್: ರಾಜ್ಯದಲ್ಲಿ ಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಜತೆಗೆ ಲೋಡರ್‌ಗಳು, ಕ್ಲೀನರ್‌ಗಳು, ಕಸ ವಿಲೇವಾರಿ ವಾಹನ ಚಾಲಕರು ಹಾಗೂ ಒಳಚರಂಡಿ ಇಲಾಖೆಯಲ್ಲಿ ಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಮೇ 1ರ ಕಾರ್ಮಿಕರ ದಿನಾಚರಣೆಯಂದು ಖಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾಸಂಘದ 25ನೇ ವಾರ್ಷಿಕೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಪೌರ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಇದರಿಂದ ಅಂದಾಜು 10 ಸಾವಿರ ಪೌರಕಾರ್ಮಿಕರ ಸೇವೆ ಖಾಯಂಗೊಳ್ಳಲಿದೆ ಎಂದರು. ಪೌರಕಾರ್ಮಿಕರ ಸಮುದಾಯಕ್ಕೆ ನಗದುರಹಿತ ಆರೋಗ್ಯ ಕಾರ್ಡ್ ನೀಡಲಾಗುವುದಲ್ಲದೆ, ಪೌರಕಾರ್ಮಿಕರ ಸಿಂಧುತ್ವ ಸಮಸ್ಯೆ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ವೃತ್ತಿ ಘನತೆಗಾಗಿ ಖಾಯಂ ದೊಡ್ಡ ಕೆಲಸ- ಸಣ್ಣ ಕೆಲಸ ಎಂಬ ತಾರತಮ್ಯ ಇರಬಾರದು. ಪೌರಕಾರ್ಮಿಕ ಇರಲಿ, ಮುಖ್ಯ ಕಾರ್ಯದರ್ಶಿ ಇರಲಿ; ವ್ಯತ್ಯಾಸವಿಲ್ಲ. ಎಲ್ಲರಿಗೂ ವೃತ್ತಿ ಘನತೆ ಸಿಗಬೇಕು. ಈ ಕಾರಣದಿಂದ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.